ವೀರಾಜಪೇಟೆ, ಆ. ೨೬: ಶಾಂತಿಯುತ ಸಭೆ, ಮೆರವಣಿಗೆ ನಡೆಸುವುದಕ್ಕೆ ಅನುಮತಿಗಾಗಿ ೧,೫೦೦ ರೂ ಶುಲ್ಕ ಪಾವತಿ ಮಾಡಲು ಸರಕಾರ ಆದೇಶ ಮಾಡಿರುವುದು ಹಾಸ್ಯಾಸ್ಪದ ಎಂದು ನಾಗರಿಕ ಸಮಿತಿ ಸಂಚಾಲಕ ಡಾ. ಇ.ಆರ್. ದುರ್ಗಪ್ರಸಾದ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ನಗರದಲ್ಲಿ ಇತಿಹಾಸ ಪ್ರಸಿದ್ದ ಗೌರಿ-ಗಣೇಶೋತ್ಸವ ಆಚರಣೆಗಳು ನಡೆಯಲಿವೆ. ಸಮಿತಿಗಳು ವಿವಿಧ ಇಲಾಖೆಗಳಿಂದ ಅನುಮತಿಗಾಗಿ ನಿರಾಪೇಕ್ಷಣಾ ಪತ್ರ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಆರಕ್ಷಕ ಠಾಣೆಯ ಸಿಬ್ಬಂದಿಗಳು ಅರ್ಜಿಯೊಂದಿಗೆ ೧೫೦೦ ರೂ ನೀಡುವಂತೆ ಸಮಿತಿ ಸದಸ್ಯರಿಗೆ ತಿಳಿಸಿದ್ದಾರೆ.
ಈ ಹಿಂದೆ ಧ್ವನಿವರ್ಧಕ ಅಳವಡಿಸಲು ರೂ.೧೮೦ ನೀಡುವ ಪರಿಪಾಠವಿತ್ತು. ಆದರೆ, ಪ್ರಸ್ತುತ ಸರಕಾರ ಧಾರ್ಮಿಕ ಉತ್ಸವ, ಮದುವೆ, ಧರ್ಮದ ಮೆರವಣಿಗೆ ಹೀಗೆ ಹಲವು ವಿಷಯಗಳಿಗೆ ಶುಲ್ಕ ವಿಧಿಸಿರುವುದು ಹಾಸ್ಯಾಸ್ಪದ. ಮುಂದೊAದು ದಿನ ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡಲು ಶುಲ್ಕ ವಿಧಿಸಬಹದು ಎಂದು ವ್ಯಂಗ್ಯವಾಡಿದರು. ಇದು ಬೊಕ್ಕಸವನ್ನು ತೆರಿಗೆ ಮೂಲಕ ತುಂಬಿಸುವ ಪ್ರಯತ್ನವಾಗಿದೆ.
ಜನಸಮಾನ್ಯರ ಮೇಲೆ ಆರ್ಥಿಕ ಹೊರೆಯಾಗಿರುವುದರಿಂದ ಆದೇಶವನ್ನು ಕೈಬಿಡಬೇಕು ಎಂದು ನಾಗರಿಕ ಸಮಿತಿ ಒತ್ತಾಯ ಮಾಡುವುದಾಗಿ ಹೇಳಿದರು. ಸಮಿತಿಯ ಸಹಸದಸ್ಯ ವಕೀಲ ಸೋಮಲೋಕನಾಥ ಮಾತನಾಡಿ, ಜಿಲ್ಲೆಯ ವಿವಿಧೆಡೆಗಳಲ್ಲಿ ಉತ್ಸವ ಆಚರಿಸುವ ಸಮಿತಿಗಳು ಆರ್ಥಿಕವಾಗಿ ಹಿಂದುಳಿದೆ. ಧರ್ಮ ಉಳಿಯಬೇಕು, ಸಂಸ್ಕಾರ, ಆಚರಣೆಗಳು ಚಿರಂಜೀವಿಯಾಗಿರಬೇಕು ಎನ್ನುವ ಆಶಯದೊಂದಿಗೆ ಉತ್ಸವ ಆಚರಣೆಯಾಗುತ್ತಿದೆ.
ಆದರೆ ಧರ್ಮದಾಚರಣೆಗೂ ತೆರಿಗೆ ವಿಧಿಸಿರುವುದು ಸರಿಯಲ್ಲ. ಮೆರವಣಿಗೆ ಮತ್ತು ಶಾಂತಿ ಸಭೆ ನಡೆಸಲು ಆರ್ಥಿಕ ಇಲಾಖೆ ಶುಲ್ಕ ವಿಧಿಸಿರುವುದು ಸಂವಿಧಾನ ವಿರುದ್ಧವಾಗಿದೆ. ಪ್ರಸ್ತುತ ಸರಕಾರ ಹಿಂದೂ ಧರ್ಮ ಆಚರಣೆಯ ವಿರುದ್ಧವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು. ಹಲವು ಬಿಟ್ಟಿ ಭಾಗ್ಯಗಳನ್ನು ನೀಡುತ್ತಾ ಬೊಕ್ಕಸ ಬರಿದಾಗಿರುವುದರಿಂದ ತೆರಿಗೆಯ ವಿವಿಧ ಮಜಲುಗಳನ್ನು ಹುಡುಕುತ್ತಾ ಜನಸಮಾನ್ಯರ ಮೇಲೆ ಆರ್ಥಿಕ ಹೊರೆ ಹೊರಿಸಲು ಮುಂದಾಗಿರುವುದು ಶೋಚನೀಯ. ಜನಸಮಾನ್ಯರ ರಕ್ತಹಿಂಡುವ ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ನಾಗರಿಕ ಸಮಿತಿಯ ಮೂಲಕ ಸರಕಾರವನ್ನು ಆಗ್ರಹಪಡಿಸುತ್ತಿದ್ದೇವೆ ಎಂದು ಹೇಳಿದರು.