ಪೊನ್ನಂಪೇಟೆ, ಆ. ೨೪: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ೨೦೨೪-೨೫ ನೇ ಸಾಲಿನ "ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿ"ಗೆ ಪೊನ್ನಂಪೇಟೆಯ ದಿಶಿಕಾ. ಸಿ. ಎಚ್. ಭಾಜನಳಾಗಿದ್ದಾಳೆ. ಶಿಕ್ಷಣದ ಜೊತೆಗೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿ ಪತ್ರದ ಜೊತೆಗೆ ೧೦ ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗಿದೆ. ಭರತನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ದಿಶಿಕಾ, ಮಂತ್ರಾಲಯ, ಕಟೀಲು, ಉಡುಪಿ, ಕೇರಳ ರಾಜ್ಯದ ಕಣ್ಣೂರು, ಗುರುವಾಯೂರು, ತಮಿಳುನಾಡಿನ ವೆಲ್ಲೂರು ಸೇರಿದಂತೆ ರಾಜ್ಯದ ಹಲವೆಡೆ ೮೦ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಈಕೆ ಪೊನ್ನಂಪೇಟೆ ಸಂತ ಅಂಥೋನಿ ಶಾಲೆಯಲ್ಲಿ ೭ ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯ ನೃತ್ಯ ಗುರು ಪ್ರೇಕ್ಷ ಭಟ್ ಅವರ ಮಾರ್ಗದರ್ಶನದಲ್ಲಿ ಭರತ ನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ಈ
ಕೆ ಪೊನ್ನಂಪೇಟೆಯಲ್ಲಿ ಚಿಣ್ಣೀರ ಹರೀಶ್ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ.