*ಗೋಣಿಕೊಪ್ಪ, ಆ. ೨೬: ಮುಖಚರ್ಯೆ ಗುರುತಿಸುವ ಎಫ್.ಆರ್.ಎಸ್ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಪೊನ್ನಂಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತರ ಸಂಘ ತಾಲೂಕು ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಹಿಂಭಾಗದಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಅಧ್ಯಕ್ಷೆ ಸುಮಿತ್ರ ವಿ.ಎಸ್ ನೇತೃತ್ವದಲ್ಲಿ ಯೋಜನಾಧಿಕಾರಿ ರೇಣುಕಾ ಹೊಸಮನಿ ಅವರಿಗೆ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಅಧ್ಯಕ್ಷೆ ಸುಮಿತ್ರ ಮಾತನಾಡಿ, ಬಹುದಿನಗಳಿಂದ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದರೂ, ಸ್ಪಂದನ ಸಿಗುತ್ತಿಲ್ಲ. ಈ ವಿಚಾರವಾಗಿ ಕಾರ್ಯಕರ್ತರು ಮಾನಸಿಕವಾಗಿ ಕೆರಳಿದ್ದು, ಬೇಡಿಕೆಗಳು ಈಡೇರದೆ ಇದ್ದರೆ ಕೇಂದ್ರ ಸಚಿವರ ನಿವಾಸದ ಎದುರು ಅನಿರ್ಧಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ಬಲಪಡಿಸಲು ಮಹತ್ವದ ಪಾತ್ರ ವಹಿಸುವ ಐಸಿಡಿಎಸ್ ಯೋಜನೆ ಜಾರಿಯಾಗಿ ೫೦ ವರ್ಷಗಳು ತುಂಬುತ್ತಿವೆ. ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಮುಂದಾಗುವ ಬದಲು ಯೋಜನೆಯನ್ನು ಸಂಕೀರ್ಣಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ಸೌಲಭ್ಯ ಕೊಡದೆ ಮುಖಚರ್ಯೆ ಗುರುತಿಸುವ ಎಫ್‌ಆರ್‌ಎಸ್ ಅಳವಡಿಸಿದ್ದು ಕ್ಷೇತ್ರ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಅನುಭವಿಸುವಂತಾಗಿದೆ ಎಂದರು. ಎಫ್‌ಆರ್‌ಎಸ್ ಮುಖಾಂತರ ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಅಪಾಯವಿದ್ದು, ಸೈಬರ್ ವಂಚನೆಗಳು ಹೆಚ್ಚಾಗುವ ಭೀತಿ ಇದೆ ಎಂದರು. ಎಫ್‌ಆರ್‌ಎಸ್ ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ‘ಸಿ’ ಮತ್ತು ‘ಡಿ’ ಗುಂಪಿನ ನೌಕರರು ಎಂದು ಪರಿಗಣಿಸಬೇಕು. ೨೦೧೮ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಿ, ಫಲಾನುಭವಿಗಳ ಘಟಕ ವೆಚ್ಚವನ್ನು ಹೆಚ್ಚಿಸಬೇಕು ಎಂದು ಈ ಸಂದರ್ಭ ಒತ್ತಾಯಿಸಿದರು,

ಸಂಘದ ಪ್ರಧಾನ ಕಾರ್ಯದರ್ಶಿ ನಳಿನಾಕ್ಷಿ, ಕೋಶಾಧಿಕಾರಿ, ರಾಜೇಶ್ವರಿ, ಸೇರಿದಂತೆ ವರ್ತುಲದ ಪದಾಧಿಕಾರಿಗಳು, ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಇದ್ದರು