ಮಡಿಕೇರಿ, ಆ. ೨೫: ೨೬ ವರ್ಷಗಳ ಐತಿಹ್ಯ ಹೊಂದಿ ವಿಶ್ವ ದಾಖಲೆ ಬರೆದು ಜಾಗತಿಕ ಮಟ್ಟದಲ್ಲಿ ಹೆಗ್ಗುರುತು ಮೂಡಿಸಿರುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಈ ವರ್ಷ ಚೇನಂಡ ಕುಟುಂಬ ಆತಿಥ್ಯ ವಹಿಸಿದ್ದು, ವಿನೂತನ ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ಹರಿಸಿದೆ. ಅದರ ಭಾಗವಾಗಿ ಹಾಕಿ ಹಬ್ಬ ಆರಂಭದ ಹೊತ್ತಿಗೆ ೨,೫೦೦ ಗಿಡಗಳನ್ನು ನೆಡುವ ಗುರಿಯನ್ನಿಟ್ಟುಕೊಂಡಿದೆ. ಈ ಮೂಲಕ ಹಾಕಿ ಕಲರವಕ್ಕೆ ಮುನ್ನುಡಿ ಇಟ್ಟಂತಾಗಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇನಂಡ ಹಾಕಿ ನಮ್ಮೆ ಕಾರ್ಯದರ್ಶಿ ಮಧು ಮಾದಯ್ಯ, ೧೯೯೭ರಲ್ಲಿ ಪಾಡಂಡ ದಿ. ಕುಟ್ಟಪ್ಪ ಅವರು ಆರಂಭಿಸಿದ ಕೊಡವ ಕೌಟುಂಬಿಕ ಹಾಕಿ ನಮ್ಮೆ ಇಂದು ಹೆಮ್ಮರವಾಗಿ ಬೆಳೆದು ಗಿನ್ನಿಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ನಾನಾ ಸಾಧನೆಯೊಂದಿಗೆ ಜನಾಂಗದ ಅಸ್ಮಿತೆಯಾಗಿ ಮೂಡಿದೆ. ಈ ಬಾರಿ ಚೇನಂಡ ಕುಟುಂಬ ಕೌಟುಂಬಿಕ ಹಾಕಿ ನಮ್ಮೆ ಆತಿಥ್ಯ ವಹಿಸಿದ್ದು, ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನದಲ್ಲಿ ೨೦೨೬ರ ಏಪ್ರಿಲ್ ೫ ರಿಂದ ಮೇ೨ ರ ತನಕ ಪಂದ್ಯಾಟ ಆಯೋಜಿಸಲಾಗಿದೆ. ಇದಕ್ಕಾಗಿ ಕುಟುಂಬಸ್ಥರು ಸರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಗಿಡ ನೆಡುವ ಗುರಿ

ಪಂದ್ಯಾಟದೊAದಿಗೆ ಸಾಮಾಜಿಕ ಚಟುವಟಿಕೆ ನಡೆಸುವ ಚಿಂತನೆಯೊAದಿಗೆ ೨,೫೦೦ ಗಿಡಗಳನ್ನು ನೆಡುವುದರೊಂದಿಗೆ ನಿರ್ವಹಣೆ ಮಾಡುವ ಮಹತ್ವಾಕಾಂಕ್ಷೆಯನ್ನು ಕುಟುಂಬ ಹೊಂದಿದೆ ಎಂದು ಮಧು ಮಾದಯ್ಯ ತಿಳಿಸಿದರು.

ಕೊಡವರು ಪ್ರಕೃತಿಯೊಂದಿಗೆ ಬೆರೆತು ಜೀವನ ನಡೆಸುವ ಜನಾಂಗವಾಗಿದೆ. ಪ್ರಕೃತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆ. ೩೧ ಅಥವಾ ಸೆ. ೧ ರಿಂದ ವಿವಿಧೆಡೆ ಗಿಡ ನಡೆವ ಯೋಜನೆ ಇಟ್ಟುಕೊಳ್ಳಲಾಗಿದೆ. ಪ್ರಥಮ ಹಂತದಲ್ಲಿ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಕೋಕೇರಿ ಗ್ರಾಮದ ನೀಲಿಯಾಟ್ ಮಂದ್‌ನಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

೨ನೇ ಹಂತದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮೂರನೇ ಹಂತಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಲಿದ್ದಾರೆ. ಟಿ. ಶೆಟ್ಟಿಗೇರಿಯ ಕೊರಕೋಟ್ ಅಯ್ಯಪ್ಪ ದೇವರಕಾಡಿನಲ್ಲಿ ಸೆ. ೧೩ ರಂದು ಗಿಡ ನೆಡುವ ಕಾರ್ಯಕ್ರಮ ಇರಲಿದೆ. ಅರಣ್ಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಲಕ್ಷö್ಮಣ ತೀರ್ಥ ನದಿ ತೀರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಆಟದ ಸಂದರ್ಭ ಆಟಗಾರರು ಬಾರಿಸುವ ಪ್ರತಿ ಗೋಲಿಗೆ ಒಂದು ಗಿಡ ನೆಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅದರ ನಿರ್ವಹಣೆಯನ್ನು ಮಾಡಲಾಗುವುದು. ಪಂದ್ಯಾಟದ ಮುಕ್ತಾಯ ಹಂತದಲ್ಲಿ ಅದರ ಸ್ಥಿತಿಗತಿಯನ್ನು ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.

ಇಂದು ‘ಬ್ರೋಷರ್’ ಬಿಡುಗಡೆ

ಚೇನಂಡ ಹಾಕಿ ನಮ್ಮೆ ಮಾಹಿತಿ ಒಳಗೊಂಡ ಬ್ರೋಷರ್ ಅನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಾ. ೨೬ ರಂದು (ಇಂದು) ತಮ್ಮ ಗೃಹ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬಿಡುಗಡೆಗೊಳಿಸಲಿದ್ದಾರೆ ಎಂದು ಹಾಕಿ ನಮ್ಮೆ ವಕ್ತಾರ ಸುರೇಶ್ ನಾಣಯ್ಯ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಹಾಕಿ ನಮ್ಮೆ ಅಧ್ಯಕ್ಷ ಕಂಬಣಿ ಕರುಂಬಯ್ಯ, ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ, ಸದಸ್ಯ ಸಚಿನ್ ಅಯ್ಯಪ್ಪ ಹಾಜರಿದ್ದರು.