ಕಣಿವೆ, ಆ. ೨೫: ಅವ್ಯಾಹತವಾಗಿ ಹಾಗೂ ಸ್ವಾಭಾವಿಕವಾಗಿ ಬೆಳೆದಿರುವ ಶ್ರೀಗಂಧದ ಗಿಡಗಳ ಹನನ ಹೆಬ್ಬಾಲೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆದಿದೆ. ಹೆಬ್ಬಾಲೆ-ಹಾಸನ ಹೆದ್ದಾರಿಯಲ್ಲಿರುವ ಹುಣಸೂರು ಕಾಫಿ ವರ್ಕ್ಸ್ ನ ವಿಶಾಲ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತ ಶ್ರೀಗಂಧದ ಮರವೊಂದನ್ನು ಆಗಂತುಕರು ಕಡಿದುರುಳಿಸಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಕಣಿವೆ ಅರಣ್ಯ ಇಲಾಖೆ ಅಧಿಕಾರಿ ಗುರುಪ್ರಸಾದ್ ತಂಡ ಭೇಟಿ ನೀಡಿ ಪರಿಶೀಲಿಸಿ ಮಹಜರ್ ನಡೆಸಿತು. ನಂತರ ಕಡಿದುರುಳಿಸಿದ್ದ ಶ್ರೀಗಂಧದ ಮರದ ನಾಟಾಗಳನ್ನು ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಿಕೊಂಡಿದೆ.
ಇದೇ ರೀತಿ ಹೆಬ್ಬಾಲೆ-ಬಾಣಾವರ ರಸ್ತೆಯುದ್ದಕ್ಕೂ ಭೈರಪ್ಪನಗುಡಿವರೆಗೂ ಸ್ವಾಭಾವಿಕವಾಗಿ ಬೆಳೆದು ನಿಂತ ಶ್ರೀಗಂಧದ ಮರಗಳು ಹೆದ್ದಾರಿ ಹೋಕರನ್ನು ಆಕರ್ಷಿಸುತ್ತಿವೆ. ಆದರೆ ಖಾಸಗಿ ಭೂಮಿಯಲ್ಲಿ ಶ್ರೀಗಂಧದ ಗಿಡಗಳು ಬೆಳೆದಿರುವುದರಿಂದ ಇವುಗಳ ರಕ್ಷಣೆಗೆ ಇಲಾಖೆ ಮುಂದಾಗುತ್ತಿಲ್ಲ ಎನ್ನಲಾಗಿದೆ.
ಆದಾಗ್ಯೂ ಅರಣ್ಯ ಇಲಾಖೆ ಶ್ರೀಗಂಧದ ಗಿಡಗಳ ಹಂತಕರ ಜಾಡು ಪತ್ತೆ ಹಚ್ಚುವ ಮೂಲಕ ಬೆಳೆಯುವ ಹಂತದಲ್ಲಿರುವ ಅಮೂಲ್ಯವಾದ ಗಿಡಗಳ ಸಂರಕ್ಷಣೆ ಮಾಡಬೇಕಿದೆ ಎಂದು ರೈತ ಮುಖಂಡ ತೊರೆನೂರಿನ ಟಿ.ಎಸ್. ಮಹೇಶ್ ಆಗ್ರಹಿಸಿದ್ದಾರೆ.