ಗೋಣಿಕೊಪ್ಪ, ಆ. ೨೫: ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತದಿಂದ ರೂ. ೧ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ಸಹಕಾರಿ ಸೇವೆಗೆ ಮತ್ತಷ್ಟು ಕ್ಷೇತ್ರಗಳ ಸೇರ್ಪಡೆಗೊಳಿಸುವ ಮೂಲಕ ಅಭಿವೃದ್ಧಿ ವಿಸ್ತಾರ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ಕೊಡಗು ಸಹಕಾರ ಸಂಘಗಳು ಇಡೀ ರಾಜ್ಯಕ್ಕೆ ಮಾದರಿ. ಸಂಘಗಳನ್ನು ಉಳಿಸಿಕೊಳ್ಳುವ ಬಗ್ಗೆ ಜಿಲ್ಲೆಯ ಸಹಕಾರಿಗಳು ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಕೂಡ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಪ್ರಜಾಪ್ರಭುತ್ವದ ಅಂಗದಲ್ಲಿ ಸಹಕಾರಿಗಳ ಮಹತ್ವ ಹೆಚ್ಚಿದೆ ಎಂದರು. ರಾಷ್ಟಿçÃಯ ಸಹಕಾರಿ ನಿಯಮ ಅನುಷ್ಠಾನದಲ್ಲಿ ಸಾಕಷ್ಟು ಸಹಕಾರಿ ವ್ಯವಸ್ಥೆ ಪ್ರಬಲಗೊಳಿಸುವುದು, ಭಾರತೀಯ ವೈವಿಧ್ಯತೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದನ್ನು ಸೇರಿಸಿಕೊಂಡಿದೆ. ಯುವ ಸಮೂಹದ ಸಹಭಾಗಿತ್ವ ಕೂಡ ಮುಖ್ಯವಾಗಿದೆ. ಟ್ಯಾಕ್ಸಿ, ವಿಮೆ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ ಸೇವೆಯನ್ನು ಕೂಡ ಸಹಕಾರಿ ಕ್ಷೇತ್ರದಲ್ಲಿ ಸೇರಿಸಿಕೊಂಡು ಮುಂದುವರಿಯಲಾಗಿದೆ. ಡಿಜಿಟಲೀಕರಣ ಕೂಡ ಸೇರಿದ್ದು, ನೈಸರ್ಗಿಕ ಮೂಲ ಸೌಕರ್ಯ ಮೂಲದ ಯೋಜನೆ, ಹವಾಮಾನ ಬದಲಾವಣೆ ಬಗ್ಗೆ ಸಕರಾತ್ಮಕ ವೇದಿಕೆಗೂ ಸಹಕಾರಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಕಸದಿಂದ ವಿದ್ಯುತ್ ಪರಿವರ್ತನೆಗೂ ಕೂಡ ಸಹಕಾರಿಗಳ ಅವಲಂಬನೆಗೆ ಮುಂದಾಗಿದೆ ಎಂದು ಸಂಸದರು ಹೇಳಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ರೈತರ ಏಳಿಗೆಗೆ ಸಹಕಾರ ಸಂಘಗಳ ಕೊಡುಗೆ ದೊಡ್ಡದು. ನೂತನ ವಿನ್ಯಾಸದೊಂದಿಗೆ ನಿರ್ಮಾಣವಾದ ಆಡಳಿತ ಕಟ್ಟಡ ಸಹಕಾರ ಸಂಘಗಳು ರೈತರ ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಕಟ್ಟಡದಲ್ಲಿ ಮತ್ತಷ್ಟು ಯಶಸ್ಸನ್ನು ಕಾಣುತ್ತಾ ಲಾಭದೊಂದಿಗೆ ರೈತರ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ಅರಮಣಮಾಡ ಪಿ. ಗಣಪತಿ ಮಾತನಾಡಿ, ಸಂಘದ ಸದಸ್ಯರ ಅನುಕೂಲ, ಆದಾಯ ಮತ್ತು ಅಭಿವೃದ್ಧಿ ಹೆಚ್ಚಿಸುವ ದೃಷ್ಠಿಯಿಂದ ಪಟ್ಟಣದ ಹೃದಯ ಭಾಗದಲ್ಲಿ ರೂ.೧ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದರ ಸದುಪಯೋಗ ಸದಸ್ಯರು ಪಡೆದುಕೊಳ್ಳಬೇಕಿದೆ. ೧೯೫೬ರಲ್ಲಿ ಸಂಘಕ್ಕೆ ಅಡಿಗಲ್ಲು ಇಟ್ಟು, ೧೯೫೮ ರಲ್ಲಿ ಸಂಘ ನೋಂದಣಿ ಮೂಲಕ ಸ್ಥಳೀಯವಾಗಿ ಸಾಕಷ್ಟು ಸಹಕಾರಿ ಸೇವೆ ನೀಡುತ್ತಾ ಬಂದಿದೆ ಎಂದರು. ದಾನಿ ಪೋಡಮಾಡ ಚಂಗಪ್ಪ ಅವರು ಉದಾರವಾಗಿ ನೀಡಿದ ಜಾಗದಲ್ಲಿ ನಿರ್ಮಿಸಿರುವ ಸಂಘ ಸಾಕಷ್ಟು ಸೇವೆ ಒದಗಿಸುತ್ತಿದೆ. ದಾನಿ ಪೋಡಮಾಡ ನಾಚಪ್ಪ ಅವರು ರಸ್ತೆಗೆ ಜಾಗವನ್ನು ನೀಡಿ ಸಂಘದ ಏಳಿಗೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಹಿರಿಯ ಸಹಕಾರಿಗಳು ಮತ್ತು ದಾನಿಗಳನ್ನು ಸ್ಮರಿಸಿಕೊಳ್ಳಲಾಗುತ್ತಿದೆ ಎಂದರು. ಬಾಳೆಲೆ, ಕೊಟ್ಟಗೇರಿ, ನಿಟ್ಟೂರು, ದೇವನೂರು, ಪೊನ್ನಪ್ಪಸಂತೆ, ಬಿಳೂರು, ಗ್ರಾಮಗಳ ರೈತರ ಬೇಡಿಕೆಗೆ ಸಂಘ ಸ್ಪಂದಿಸುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಸಂಘದ ಉಪಾಧ್ಯಕ್ಷ ಪಿ. ಜಿ. ಜಾನಕ್ಕಿ, ಬಾಳೆಲೆ ಪ್ಯಾಕ್ಸ್ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪೊನ್ನಪ್ಪ, ಬಾಳೆಲೆ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಪೊನ್ನಪ್ಪಸಂತೆ ಗ್ರಾ. ಪಂ. ಅಧ್ಯಕ್ಷ ತೀತರಮಾಡ ಎಸ್. ಕುಶಾಲಪ್ಪ, ನಿಟ್ಟೂರು ಗ್ರಾ. ಪಂ. ಅಧ್ಯಕ್ಷೆ ಪಿ. ಆರ್. ಅಮ್ಮುಣಿ, ಸಂಘದ ಸಿಇಒ ಟಿ. ಎ. ಅನಿತಾ ಉಪಸ್ಥಿತರಿದ್ದರು.