ಶನಿವಾರಸಂತೆ, ಆ. ೨೩: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯಲ್ಲಿ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ “ವಿಶ್ವ ಸೊಳ್ಳೆ ದಿನ’’ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ಪಿ.ನರಸಿಂಹ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ ಮಾತನಾಡಿ, ಸೊಳ್ಳೆಗಳಿಂದ ಹರಡುವ ಮಲೇರಿಯಾ ಜ್ವರವನ್ನು ಶೀಘ್ರವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಸಂಪೂರ್ಣ ಗುಣಪಡಿಸಬಹುದು. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಜ್ವರದ ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಅಗತ್ಯ. ನೀರಿನ ಶುಚಿತ್ವ, ಪರಿಸರದ ಸ್ವಚ್ಛತೆ ಮೂಲಕ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಿಂದ ಪಾರಾಗಬಹುದು ಎಂದು ತಿಳಿಸಿ ಆರೋಗ್ಯ ಶಿಕ್ಷಣ ಮತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಮಾತನಾಡಿ, ಕ್ಷಯ ರೋಗದ ಲಕ್ಷಣ, ರೋಗದ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಕ್ಷಯರೋಗ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತಾ, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ರಶೀದ್, ಆಶಾ ಕಾರ್ಯಕರ್ತೆ ಜ್ಯೋತಿ, ಆಪ್ತ ಸಮಾಲೋಚಕಿ ಶೈಲಜಾ, ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಪಿ. ನರಸಿಂಹಮೂರ್ತಿ, ಶಿಕ್ಷಕಿಯರಾದ ಎಚ್.ಎನ್. ಮಂಗಳಾ, ಶಬಾನಾ, ಭವಾನಿ, ಸರೋಜಿನಿ, ಸಿಬ್ಬಂದಿ ದೊಡ್ಡಯ್ಯ ಹಾಜರಿದ್ದರು.