ಚೆಯ್ಯAಡಾಣೆ/ನಾಪೋಕ್ಲು ಆ. ೨೪: ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಾಪೋಕ್ಲು ಮೂರ್ನಾಡು ಮುಖ್ಯರಸ್ತೆಯ ಹೊದವಾಡ ಗ್ರಾಮದ ಬೊಳಿಬಾಣೆ ಎಂಬಲ್ಲಿ ನಡೆದಿದೆ.

ಮರಗೋಡು ಅಭ್ಯತ್‌ಮಂಗಲ ನಿವಾಸಿಗಳು ಪಾಲೂರು ದೇವಾಲಯದಲ್ಲಿ ಕಾರ್ಯಕ್ರಮ ಮುಗಿಸಿ ಮೂರ್ನಾಡು ಮಾರ್ಗವಾಗಿ ಅಭ್ಯತ್‌ಮಂಗಲ ಕಡೆಗೆ ಮಾರುತಿ ಸ್ವಿಫ್ಟ್ (ಕೆಎ-೧೨-ಝೆಡ್-೬೯೧೯) ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಮೂರ್ನಾಡುವಿನಿಂದ ನಾಪೋಕ್ಲು ಕಡೆಗೆ ಬರುತ್ತಿದ್ದ ಹ್ಯುಂಡೈ ಐ-ಟೆನ್ (ಕೆಎ-೧೨ ಝೆಡ್-೬೦೭೮)ಕಾರಿನ ನಡುವೆ ಬೊಳಿಬಾಣೆ ಬಳಿಯ ರಸ್ತೆ ತಿರುವಿನಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಅಪಘಾತದಿಂದ ಹ್ಯುಂಡೈ ಐಟೆನ್ ಕಾರಿನಲ್ಲಿದ್ದ ಕುಂಜಿಲ ಗ್ರಾಮದ ನಿವಾಸಿಗಳಾದ ಚಿತ್ರಬಾನು, ದಿವ್ಯ ಹಾಗೂ ಮಗುವಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಭ್ಯತ್‌ಮಂಗಲದ ನಿವಾಸಿಗಳಾದ ಕೌಶಿಕ್, ಮಲ್ಲಿಗೆ, ತುಷ್ಟಿ ಎಂಬ ಮಗುವಿಗೂ ಗಾಯಗಳಾಗಿವೆ.

ಗಾಯಾಳುಗಳಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ಗಾಯಾಳುಗಳನ್ನು ಚಿಕಿತ್ಸೆಗಾಗಿ ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಟಿ.ಎ.ಮೊಹಮ್ಮದ್ ಹನೀಫ್ ಅವರು ತಮ್ಮ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.