*ಸಿದ್ದಾಪುರ, ಆ. ೧೫: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಅತ್ತಿಮಂಗಲ- ನಲವತ್ತೆಕ್ಕರೆ ಮುಖ್ಯ ರಸ್ತೆಯ ಸಮೀಪದ ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರತಿನಿತ್ಯ ಗ್ರಾಮಸ್ಥರು ಸಂಚರಿಸುವ ಈ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಭಾಗ್ಯ ಇಲ್ಲಿಯವರೆಗೆ ದೊರೆತಿಲ್ಲ.
ಜನವಸತಿ ಪ್ರದೇಶದ ಈ ರಸ್ತೆ ಮಳೆಗಾಲಕ್ಕೂ ಮೊದಲೇ ಹೊಂಡಗುAಡಿಗಳಿAದ ಕೂಡಿತ್ತು. ದುರಸ್ತಿಪಡಿಸುವಂತೆ ನಿವಾಸಿಗಳು ಮನವಿ ಮಾಡಿಕೊಂಡಿದ್ದರೂ ಆಡಳಿತ ವ್ಯವಸ್ಥೆಯಿಂದ ಯಾವುದೇ ಸ್ಪಂದನ ದೊರೆತಿರಲಿಲ್ಲ. ಇದೀಗ ಕಳೆದ ಎರಡು ತಿಂಗಳ ಭಾರೀ ಮಳೆಯಿಂದ ಕೆಸರುಮಯವಾಗಿರುವ ರಸ್ತೆಯನ್ನು ಹೊಂಡಗುAಡಿಗಳಲ್ಲಿ ಹುಡುಕುವಂತಾಗಿದೆ. ಕಾಡುಗಿಡಗಳು ರಸ್ತೆಯನ್ನು ಆವರಿಸಿಕೊಂಡಿವೆ. ವಾಹನ ಸಂಚಾರ ಅಸಾಧ್ಯವಾಗಿದ್ದು, ಪಾದಚಾರಿಗಳು ಕಷ್ಟಪಟ್ಟು ನಡೆದಾಡಬೇಕಾಗಿದೆ. ಚಿಕಿತ್ಸೆಗೆಂದು ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಒಂದು ವೇಳೆ ದಾಳಿಯಾದರೆ ತಪ್ಪಿಸಿಕೊಳ್ಳಲು ಕೂಡ ಹದಗೆಟ್ಟ ರಸ್ತೆಯಲ್ಲಿ ಅಸಾಧ್ಯ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆ ಕಡಿಮೆಯಾದ ನಂತರ ರಸ್ತೆ ಡಾಂಬರೀಕರಣಗೊಳಿಸಬೇಕು ಅಥವಾ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.