ಮಡಿಕೇರಿ, ಆ. ೧೪ : ಗಣೇಶೋತ್ಸವ ಆಚರಣೆ ಸಂದರ್ಭ ಅಬ್ಬರದ ಡಿಜೆ ಬಳಕೆಗೆ ಅವಕಾಶವಿಲ್ಲ; ಒಂದು ವೇಳೆ ನಿಯಮ ಮೀರಿ ಬಳಕೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಗಣಪತಿ ಉತ್ಸವ ಸಮಿತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಗೌಡ ಸಮಾಜದಲ್ಲಿ ಡಿಜೆ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಸಮಿತಿ ಪ್ರಮುಖರು ಹಾಗೂ ಲೈಟ್ ಆ್ಯಂಡ್ ಸೌಂಡ್ಸ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. ಗಣೇಶೋತ್ಸವ ಆಚರಣೆ ವೇಳೆ ಲೌಡ್ ಸ್ಪೀಕರ್ ಬಳಸಬಾರದೆಂದು ತಾನು ಹೇಳುತ್ತಿಲ್ಲ; ಆದರೆ ಪ್ರಷರ್‌ಮಿಡ್‌ಗಳನ್ನು ಬಳಸಿ ಅಬ್ಬರದ ಶಬ್ಧದಿಂದ ಜನರಿಗೆ ತೊಂದರೆ ಮಾಡಬಾರದು. ಅಬ್ಬರದ ಶಬ್ಧ ಕಿವಿ ಹಾಗೂ ಹೃದಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಮಾನಸಿಕ ತೊಂದರೆಗೂ ಕಾರಣವಾಗುತ್ತದೆ. ಆದ್ದರಿಂದ ಶಬ್ಧದ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿದರೆ ಮೆರವಣಿಗೆ ಸಂದರ್ಭ ನಾವು ಅಡ್ಡಿಪಡಿಸುವುದಿಲ್ಲ ಬದಲಿಗೆ ಮೆರವಣಿಗೆ ಮುಗಿದ ಬಳಿಕ ಧ್ವನಿವರ್ಧಕ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮ ಜರುಗಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಒತ್ತಡಗಳಿಗೂ ತಾನು ಮಣಿಯುವುದಿಲ್ಲ ಎಂದ ಎಸ್ಪಿ ನಾಗರಿಕರ ಸುರಕ್ಷತೆಯೆ ತನಗೆ ಅತೀ ಮುಖ್ಯ ಎಂದು ಹೇಳಿದರು.

ಗಣೇಶೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಬೇಕು. ಮುಂದಿನ ಪೀಳಿಗೆಗೂ ಮಾದರಿಯಾಗುವ ರೀತಿಯಲ್ಲಿ ಆಚರಣೆ ಮಾಡಬೇಕು. ಈ ಆಚರಣೆಯಿಂದ ಯಾರಿಗೂ ತೊಂದರೆಗಳಾಗಬಾರದು. ಆದ್ದರಿಂದ ಉತ್ಸವ ಸಮಿತಿಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ಉತ್ಸವ ಆಚರಣೆ ಮಾಡಬೇಕು ಎಂದು ರಾಮರಾಜನ್ ಕಿವಿಮಾತು ಹೇಳಿದರು.

‘ಸ್ವಯಂ ಜಾಗೃತಿ ಅವಶ್ಯ’

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಡಿಜೆ ಬಳಕೆ ಸಂಬAಧ ಕಾನೂನನ್ನು ಪಾಲನೆ ಮಾಡಬೇಕು ಎಂಬುದರ ಜೊತೆಗೆ ಅಬ್ಬರದ ಡಿಜೆಯಿಂದಾಗುವ ಸಮಸ್ಯೆಯ ಬಗ್ಗೆ ಉತ್ಸವ ಸಮಿತಿಗಳು ಅರಿತುಕೊಂಡು ಸ್ವಯಂ ಜಾಗೃತರಾಗಬೇಕು ಎಂದರು. ಇಂದು ಎಲ್ಲೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅಬ್ಬರದ ಡಿಜೆಯಿಂದಲೂ ಹೃದಯಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಅಬ್ಬರದ ಡಿಜೆ ಬಳಕೆಗೆ ಉತ್ಸವ ಸಮಿತಿಗಳು ವಿದಾಯ ಹೇಳುವಂತಾಗಬೇಕು ಎಂದು ಸಲಹೆಯಿತ್ತರು.

೯೦ ಡೆಸಿಬಲ್ ಉತ್ತಮ

ಅಬ್ಬರದ ಡಿಜೆ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದ ವೈದ್ಯಕೀಯ ಕಾಲೇಜಿನ ಇಎನ್‌ಟಿ ತಜ್ಞ ಡಾ. ಶ್ರೀಕಾಂತ್ ೯೦ ಡೆಸಿಬಲ್ ಪ್ರಮಾಣದ ಶಬ್ಧಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ಧದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು. ಹೆಚ್ಚಿನ ಶಬ್ಧದಿಂದ ಕಿವಿಯ ತಮಟೆಗೆ ಹಾನಿಯಾಗುತ್ತದೆ. ಬಳಿಕ ನರಗಳೀಗೂ ತೊಂದರೆ ಆಗುತ್ತದೆ, ನರಗಳಿಗೆ ತೊಂದರೆ ಆದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಅತಿಯಾದ ಶಬ್ಧದಿಂದ ಹೃದಯಸ್ತಂಬನ, ಮೆದುಳಿನ ರಕ್ತಸ್ರಾವ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ ಎಂದು ಶ್ರೀಕಾಂತ್ ತಿಳಿಸಿದರು.

ವೇದಿಕೆಯಲ್ಲಿ ಮಡಿಕೇರಿ ಡಿವೈಎಸ್ಪಿ ಸೂರಜ್ ಉಪಸ್ಥಿತರಿದ್ದರು. ನಗರ ವೃತ್ತನಿರೀಕ್ಷಕ ರಾಜು ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಬಳಿಕ ಯಾವ ಪ್ರಮಾಣದ ಶಬ್ಧವನ್ನು ಬಳಸಬಹುದು, ಯಾವುದನ್ನು ಬಳಸಬಾರದು ಎಂಬ ಬಗ್ಗೆ ಉತ್ಸವ ಸಮಿತಿಗಳ ಪ್ರಮುಖರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ೯೦ ಡಿಸಿಬಲ್‌ವರೆಗಿನ ಧ್ವನಿವರ್ಧಕವನ್ನು ಮಾತ್ರ ಬಳಸುವಂತೆ ಸೂಚಿಸಲಾಯಿತು.