ಮಡಿಕೇರಿ, ಆ. ೧೨: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ಕ್ರಮ ವಿರೋಧಿಸಿ ನಗರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಡಳಿತ ಭವನ ಎದುರು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ೭೦ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಸರಕಾರದ ನೀತಿ ವಿರೋಧಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸಂಬAಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ಅನುಮೋದನೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್, ೨೦೧೭ರಲ್ಲಿ ರಾಜ್ಯ ಸರಕಾರ ೧ ರಿಂದ ೮ನೇ ತರಗತಿ ತನಕ ಬೋಧನೆ ಮಾಡುತ್ತಿದ್ದ ಪ್ರಾಥಮಿಕ ಶಿಕ್ಷಕರನ್ನು ೧ ರಿಂದ ೫ನೇ ತರಗತಿ ಬೋಧಿಸುವಂತೆ ಅನ್ವಯಿಸಿ ಹಿಂಬಡ್ತಿ ಕ್ರಮವನ್ನು ಹೇರಿತ್ತು. ಇದನ್ನು ಶಿಕ್ಷಕರು ವಿರೋಧಿಸಿ ಬೃಹತ್ ಹೋರಾಟ ಕೈಗೊಂಡ ಪರಿಣಾಮ ಸಮಿತಿ ರಚಿಸಿ ಒಂದು ತಿಂಗಳಿನಲ್ಲಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿತ್ತು. ಆದರೆ, ಇದುವರೆಗೆ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಸಂವಿಧಾನದ ಪ್ರಕಾರ ನಿಯಮ ಜಾರಿಯಾದ ದಿನದಿಂದ ಅದನ್ನು ಅನುಷ್ಠಾನ ಮಾಡಬೇಕು. ಆದರೆ, ಶಿಕ್ಷಕರ ವಿಚಾರದಲ್ಲಿ ಪೂರ್ವ ಅವಧಿ ಅನ್ವಯಿಸಿ ೨೦೧೭ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರನ್ನು ಹಿಂಬಡ್ತಿಗೆ ದೂಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾ. ೨೫ರೊಳಗೆ ಶಿಕ್ಷಕರ ಬೇಡಿಕೆ ಈಡೇರದಿದ್ದಲ್ಲಿ ಶಾಲೆಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸರಕಾರದ ಅವೈಜ್ಞಾನಿಕ ನೀತಿ ಶಿಕ್ಷಕರನ್ನು ಕಂಗೆಡಿಸಿದೆ. ಇಷ್ಟು ವರ್ಷಗಳ ಕಾಲ ೮ನೇ ತರಗತಿ ತನಕ ಪಾಠ ಮಾಡಿದ ಪ್ರಾಥಮಿಕ ಶಿಕ್ಷಕರು ಇದೀಗ ಅನರ್ಹರು ಎಂದು ಕಾಣುತ್ತಿರುವುದು ವಿಪರ್ಯಾಸ. ಶಿಕ್ಷಕರು ಪಾಠ ಮಾಡುವುದರೊಂದಿಗೆ ಇತರೆ ಕೆಲಸ ಮಾಡುವ ಸಂದಿಗ್ದತೆ ಎದುರಾಗಿದೆ. ಎಲ್ಲಾ ಸರಕಾರಿ ಹುದ್ದೆಯಲ್ಲಿ ಬಡ್ತಿಯ ಅವಕಾಶವಿದೆ. ಪ್ರಾಥಮಿಕ ಶಿಕ್ಷಕರ ಜೀವನ ಮಾತ್ರ ಕುಂಠಿತವಾಗುತ್ತಿದೆ. ಈ ಬಾರಿ ಶಿಕ್ಷಕರ ದಿನ ಆಚರಿಸದೆ ಕರಾಳ ದಿನವನ್ನು ಆಚರಿಸಬೇಕಾಗುತ್ತದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸನ್ನ ಮಾತನಾಡಿ, ಶಿಕ್ಷಕರಿಗೆ ಪದೋನ್ನತಿ ದೊರೆಯುವ ಬದಲು ಹಿಂಬಡ್ತಿ ನೀಡಲು ಸರಕಾರ ಮುಂದಾಗಿದೆ. ಶಾಲೆಯ ಅಭಿವೃದ್ಧಿ, ಅಕ್ಷರ ದಾಸೋಹಗಳಿಗೆ ಶಿಕ್ಷಕರು ಹಣ ವಿನಿಯೋಗಿಸುತ್ತಿದ್ದಾರೆ. ಇವೆಲ್ಲದರ ನಡುವೆ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಅನ್ಯಾಯವೆಸಗುವುದು ಸರಿಯಲ್ಲ ಎಂದ ಅವರು, ಶಿಕ್ಷಕರಿಗೆ ಚುನಾವಣಾ ಕೆಲಸ ನೀಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಹೆಚ್.ಎನ್. ಮಂಜುನಾಥ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಕೆ. ಬಸವರಾಜು, ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ವೀರಾಜಪೇಟೆ ತಾಲೂಕು ಅಧ್ಯಕ್ಷ ಸುರೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಆಕಾಶ್, ಕವಿತಾ, ಬಿ.ವಿ. ಅಶ್ವತ್ಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.