ಮಡಿಕೇರಿ,ಆ.೧೨: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಮಡಿಕೇರಿ ತಾಲೂಕು ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಂತ ಮೈಕಲರ ತಂಡಗಳು ಗೆಲುವು ಸಾಧಿಸಿವೆ.
ಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ತಂಡ ಸಂತ ಮೈಕಲರ ಪ.ಪೂ. ಕಾಲೇಜು ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಗೆಲುವು ಸಾಧಿಸಿತು. ಸ.ಪ.ಪೂ.ಕಾಲೇಜು ತಂಡದ ಪರ ವರ್ಷ ೨ ಗೋಲು ದಾಖಲಿಸಿದರೆ, ದೇಚಕ್ಕ ಹಾಗೂ ಹೇಮ ತಲಾ ಒಂದು ಗೋಲು ಬಾರಿಸಿದರು.
ಬಾಲಕರ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕಲರ ಕಾಲೇಜು ತಂಡವು ಮೂರ್ನಾಡು ಪದವಿ ಪೂರ್ವ ಕಾಲೇಜು ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಮೈಕಲರ ತಂಡದ ಪರ ಧ್ಯಾನ್ ಮೊಣ್ಣಪ್ಪ ೨ ಹಾಗೂ ಮೊನಿಶ್ ಒಂದು ಗೋಲು ಬಾರಿಸಿದರು. ಮುಂದೆ ನಡೆಯಲಿರುವ ಜಿಲ್ಲಾಮಟ್ಟದ ಪಂದ್ಯಾವಳಿಗೆ ಈ ಎರಡು ತಂಡಗಳು ಅರ್ಹತೆ ಪಡೆದುಕೊಂಡಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಮಿನಿ ಉಣ್ಣಿರಾಜ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಸ.ಪ.ಪೂ. ಕಾಲೇಜು ಪ್ರಾಂಶುಪಾಲ ವಿಜಯ್, ಉಪನ್ಯಾಸಕರುಗಳಾದ ಚಿದಾನಂದ್, ಅಭಿಲಾಶ್, ಮಮತ, ಗಿರಿಧರ್ ಗೌಡ, ಪ್ರಥಮದರ್ಜೆ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕಿ ರಾಖಿ ಪೂವಣ್ಣ ಇದ್ದರು. ಬಾಲಕರ ವಿಭಾಗದ ಅಂತಿಮ ಪಂದ್ಯಾವಳಿಯನ್ನು ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಆಟಗಾರರನ್ನು ಪರಿಚಯ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಿದರು.