ಸೋಮವಾರಪೇಟೆ, ಆ. ೧೧: ಕೃಷಿಕರು ಉಳುಮೆ, ಕೃಷಿ, ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಏಕರೆ ಭೂಮಿಯನ್ನು ಸಿ ಮತ್ತು ಡಿ ಜಮೀನೆಂದು ವರ್ಗೀಕರಿಸಿರುವುದು, ಇಂತಹ ಕೆಲವು ಜಾಗವನ್ನು ಸೆಕ್ಷನ್-೪ ಮುಖಾಂತರ ಅರಣ್ಯಕ್ಕೆ ಒಳಪಡಿಸಲು ಮುಂದಾಗಿರುವ ಕ್ರಮದ ವಿರುದ್ಧ ರೈತ ಹೋರಾಟ ಸಮಿತಿ ತಾ. ೧೨ರಂದು (ಇಂದು) ಸೋಮವಾರಪೇಟೆ ತಾಲೂಕು ಬಂದ್‌ಗೆ ಕರೆ ಕೊಟ್ಟಿದ್ದು, ಹಲವಷ್ಟು ಸಾರ್ವಜನಿಕ ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿವೆ.

ಪ್ರಮುಖವಾಗಿ ಸೋಮವಾರಪೇಟೆ ತಾಲೂಕಿನ ಹಲವಷ್ಟು ಭೂ ಪ್ರದೇಶಕ್ಕೆ ಸಿ ಮತ್ತು ಡಿ ಗುಮ್ಮ ಅವರಿಸಿದ್ದು, ಶಾಂತಳ್ಳಿ ಹೋಬಳಿಯ ಭಾಗಶಃ ಪ್ರದೇಶ ಈ ಸಮಸ್ಯೆಯೊಳಗೆ ಸಿಲುಕಿದೆ. ಸಾವಿರಾರು ಏಕರೆ ಜಾಗದಲ್ಲಿ ಕೃಷಿ ಮಾಡಿಕೊಂಡಿರುವ, ಪ್ಲಾಂಟೇಷನ್ ಬೆಳೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಈ ಕಾಯ್ದೆಗಳು ನೆತ್ತಿಯ ಮೇಲಿನ ತೂಗುಗತ್ತಿಯಾಗಿದೆ.

ಸಿ ಮತ್ತು ಡಿ ಜಾಗದ ಸಮಸ್ಯೆ, ಸೆಕ್ಷನ್-೪ ಪ್ರಮುಖವಾಗಿ ರೈತರನ್ನು ಕಾಡುತ್ತಿದ್ದು, ಮೈಸೂರಿನಲ್ಲಿ ಕಚೇರಿ ಹೊಂದಿರುವ ಅರಣ್ಯ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರ ಕಚೇರಿಯಿಂದ ಆಗಾಗ್ಗೆ ಬರುತ್ತಿರುವ ನೋಟೀಸ್‌ಗಳು ರೈತರ ನಿದ್ದೆಗೆಡಿಸಿವೆ.

ಈ ನಿಟ್ಟಿನಲ್ಲಿ ರೈತ ಹೋರಾಟ ಸಮಿತಿ ಈಗಾಗಲೇ ಎರಡು ಬಾರಿ ಪ್ರತಿಭಟನೆ ನಡೆಸಿದ್ದು, ಇದೀಗ ಮೂರನೇ ಹೋರಾಟದ ಅಂಗವಾಗಿ ಸೋಮವಾರಪೇಟೆ ತಾಲೂಕು ಬಂದ್‌ಗೆ ಕರೆ ನೀಡಿದೆ. ರಾಜ್ಯ ವಿಧಾನ ಸಭಾ ಅಧಿವೇಶನ ಪ್ರಾರಂಭಗೊAಡಿರುವ ಹೊಸ್ತಿಲಿನಲ್ಲಿಯೇ ಸೋಮವಾರಪೇಟೆ ತಾಲೂಕು ಬಂದ್‌ಗೆ ಕರೆ ನೀಡಿದ್ದು, ಇದು ವಿಧಾನ ಸಭೆಯಲ್ಲಿ ಪ್ರಸ್ತಾಪಗೊಂಡು ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಈಗಾಗಲೇ ರೈತ ಹೋರಾಟ ಸಮಿತಿ, ಕಾಂಗ್ರೆಸ್‌ನಲ್ಲಿರುವ ಅನೇಕ ಮುಖಂಡರು, ಪದಾಧಿಕಾರಿಗಳು ಶಾಸಕರುಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಸ್ವತಃ ಶಾಸಕ ಮಂತರ್ ಗೌಡ ಅವರು, ನಿಯೋಗವನ್ನು ಬೆಂಗಳೂರಿಗೆ ಕೊಂಡೊಯ್ದು ಸಿ.ಎಂ., ಡಿಸಿಎಂ, ಸಚಿವರು, ಉನ್ನತಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೇ ಅಡ್ವೋಕೇಟ್ ಜನರಲ್ ಅವರನ್ನೂ ಸಹ ಶಾಸಕ ಮಂತರ್ ಗೌಡ ಭೇಟಿ ಮಾಡಿ, ಸಿ ಮತ್ತು ಡಿ ಜಾಗದ ಸಮಸ್ಯೆ ಬಗ್ಗೆ ವಿಸ್ತೃತ ವರದಿಯನ್ನು ಸಮಿತಿಯ ಮೂಲಕ ನೀಡಿದ್ದಾರೆ.

ಇಷ್ಟೆಲ್ಲಾ ಆಗಿದ್ದರೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ. ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಂದ ಬರುತ್ತಿರುವ ನೋಟೀಸ್‌ಗಳು ನಿಂತಿಲ್ಲ. ಈ ಹಿನ್ನೆಲೆ ಮತ್ತೊಮ್ಮೆ ವಿಧಾನ ಸಭಾ ಅಧಿವೇಶನದಲ್ಲಿ ಸಿ ಮತ್ತು ಡಿ ಜಾಗದ ಸಮಸ್ಯೆ ಚರ್ಚೆಗೆ ಬಂದು, ಮಲೆನಾಡು ಭಾಗದ ಎಲ್ಲಾ ಶಾಸಕರ ಬೆಂಬಲದೊAದಿಗೆ ಉನ್ನತಮಟ್ಟದ ಪ್ರಕ್ರಿಯೆಗಳು ನಡೆದರೆ ಮಾತ್ರ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಬಹುದು ಎಂಬುದು ರೈತ ಹೋರಾಟ ಸಮಿತಿಯ ಇಂಗಿತ. ಈ ಹಿನ್ನೆಲೆ ತಾ. ೧೨ರಂದು(ಇAದು) ಸೋಮವಾರಪೇಟೆ ಬಂದ್‌ಗೆ ಕರೆ ನೀಡಿದೆ.

ಸಂಘ ಸಂಸ್ಥೆಗಳ ಬೆಂಬಲ: ಮಾದಾಪುರದಿಂದ ಹಿಡಿದು ಕೊಡ್ಲಿಪೇಟೆವರೆಗೆ, ಆಲೂರು ಸಿದ್ದಾಪುರದಿಂದ ಹಿಡಿದು ಶಾಂತಳ್ಳಿಯ ವರೆಗೆ ಇರುವ ಬಹುತೇಕ ಗ್ರಾಮಾಭಿವೃದ್ಧಿ ಮಂಡಳಿಗಳು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತ ಬಂದ್‌ಗೆ ಬೆಂಬಲ ಸೂಚಿಸಿವೆ. ಮಾದಾಪುರದ ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘದೊAದಿಗೆ ವರ್ತಕರುಗಳೂ ಸಹ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ಸ್ಥಳೀಯರಾದ ನಾಗಂಡ ಭವಿನ್ ತಿಳಿಸಿದ್ದಾರೆ.

ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಬೆಂಬಲ ಸೂಚಿಸಿದ್ದು, ಪದಾಧಿಕಾರಿಗಳು ಬಂದ್ ಹಾಗೂ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದ್ದಾರೆ. ಕಾರ್ಮಿಕ ಸಂಘಟನೆಯಾದ ಎಐಟಿಯುಸಿ ಬೆಂಬಲಿಸಲಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ. ಬಿಜೆಪಿ ಮಂಡಲ ರೈತ ಮೋರ್ಚಾ ಬೆಂಬಲ ನೀಡಿದೆ ಎಂದು ಅಧ್ಯಕ್ಷ ಮಚ್ಚಂಡ ಪ್ರಕಾಶ್ ಹೇಳಿಕೆ ನೀಡಿದ್ದಾರೆ.

ಯಡೂರು, ಮಸಗೋಡು, ಹರಪಳ್ಳಿ, ಕಲ್ಕಂದೂರು, ತಲ್ತರೆಶೆಟ್ಟಳ್ಳಿ, ಸೋಮವಾರಪೇಟೆ ಪುಷ್ಪಗಿರಿ ಛಾಯಾಚಿತ್ರಗ್ರಾಹಕರ ಸಂಘ, ಮಡಿಕೇರಿ ತಾಲೂಕು ಒಕ್ಕಲಿಗರ ಸಂಘ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ, ಹರಗ, ತಾಲೂಕು ಕಾಫಿ ಬೆಳೆಗಾರರ ಸಂಘ, ಕಲ್ಕಂದೂರು ಗ್ರಾಮಾಭಿವೃದ್ಧಿ ಮಂಡಳಿ, ಹರಪಳ್ಳಿ ಗ್ರಾಮ ಸಮಿತಿ, ಸೋಮವಾರಪೇಟೆ ಕೊಡವ ಸಮಾಜ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಬಂದ್‌ಗೆ ಜೆಡಿಎಸ್ ಬೆಂಬಲ

ಸೋಮವಾರಪೇಟೆ, ಆ. ೧೧: ಸರ್ಕಾರದ ವಿವಾದಾತ್ಮಕ ನೀತಿಯಿಂದಾಗಿ ರೈತರಿಗೆ ಅನ್ಯಾಯ ಆಗುತ್ತಿದ್ದು, ಸಿ ಮತ್ತು ಡಿ ಸಮಸ್ಯೆ ಬಗ್ಗೆ ರೈತ ಹೋರಾಟ ಸಮಿತಿ ಕರೆ ನೀಡಿರುವ ತಾ.೧೨ರ ಸೋಮವಾರಪೇಟೆ ತಾಲೂಕು ಬಂದ್‌ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ತಾಲ್ಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರೈತರ ಪಕ್ಷವಾಗಿದ್ದು, ರೈತರಿಗೆ ಅನ್ಯಾಯವಾದಾಗ ಎಲ್ಲಾ ಕಾರ್ಯಕರ್ತರು ಹೋರಾಟಕ್ಕೆ ಧುಮುಕುತ್ತೇವೆ. ಕೊಡಗಿನಲ್ಲಿರುವ ಸಿ ಆ್ಯಂಡ್ ಡಿ ಭೂಮಿ ರೈತರ ಕೃಷಿ ಭೂಮಿಯಾಗಿದ್ದು, ಅನೇಕ ವರ್ಷಗಳಿಂದ ಕಾಫಿ ಕಾಳುಮೆಣಸು, ಭತ್ತ, ಏಲಕ್ಕಿ, ತರಕಾರಿ, ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಿ ಆ್ಯಂಡ್ ಡಿ ಭೂಮಿ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಕಂದಾಯ ಇಲಾಖೆಯವರು ಸರ್ಕಾರಕ್ಕೆ ವರದಿ ನೀಡಿರುವುದು, ಈ ವರದಿಯನ್ನು ಆಧರಿಸಿ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಯಾವುದೇ ಸಾಧನೆಗಳನ್ನು ಮಾಡದೇ ಸಾಧನಾ ಸಮಾವೇಶಗಳನ್ನು ಆಯೋಜಿಸುತ್ತಿರುವುದು ಹಾಸ್ಯಾಸ್ಪದ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಸಾಲಕ್ಕೆ ತಳ್ಳುತ್ತಿದೆ. ಸಿ&ಡಿ, ಸೆಕ್ಷನ್೪ನಂತಹ ಅವೈಜ್ಞಾನಿಕ ಕ್ರಮಗಳ ಮೂಲಕ ರೈತರನ್ನು ಅವರು, ಈ ಹಿಂದೆ ಸಿ ಮತ್ತು ಡಿ ಜಾಗಕ್ಕೂ ಹಕ್ಕುಪತ್ರ ನೀಡಲಾಗಿದೆ. ಇದೀಗ ಹಕ್ಕುಪತ್ರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಯಾವುದೇ ಸರ್ಕಾರಗಳು ಬಗೆಹರಿಸಿಲ್ಲ. ಈ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸಿದರೆ, ರೈತರು ಬೀದಿಪಾಲಾಗಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಅನ್ಯಾಯವಾಗುತ್ತದೆ ಎಂದರು.

ರೈತಾಪಿ ವರ್ಗ ಹೋರಾಟದ ಮೂಲಕ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಬೀದಿಗಿಳಿದು ಹೋರಾಟ ಮಾಡಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿರುವ ಕಾರ್ಯಕರ್ತರೆಲ್ಲರೂ ರೈತಾಪಿ ವರ್ಗಕ್ಕೆ ಸೇರಿದ್ದಾರೆ. ಪಕ್ಷಭೇದ ಮರೆತು ರೈತಪರ ಹೋರಾಟದಲ್ಲಿ ಭಾಗವಹಿಸಿ ತಮ್ಮ ಆಸ್ತಿ-ಪಾಸ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಇದೀಗ ಪೈಸಾರಿ ಜಾಗವನ್ನು ಮಾಲೀಕರಿಗೆ ಗುತ್ತಿಗೆ ಕೊಟ್ಟು ಹಣ ಪಡೆದು ಖಜಾನೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೈಸಾರಿ ಹಾಗು ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ಪ್ರವೀಣ್ ಕುಮಾರ್, ವಿಜೇಶ್, ಜಯಾನಂದ, ನವೀನ್ ಇದ್ದರು.