ಮಡಿಕೇರಿ ಆ.೭ : ಚೆಂಬು ಗ್ರಾಮ ವ್ಯಾಪ್ತಿಯ ದಬ್ಬಡ್ಕ-ಚೆಂಬು ಮತ್ತು ಊರುಬೈಲು ಚೆಂಬು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚೆಂಬು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಚಿನ್ ಕೆದಂಬಾಡಿ ಹಾಗೂ ಕಾರ್ಯದರ್ಶಿ ಪುಂಡರೀಕ ಅರಂಬೂರು ಎಚ್ಚರಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿದಿನ ಕೃಷಿಕರ ತೋಟಗಳಿಗೆ ಕಾಡಾನೆಗಳು ನುಗ್ಗಿ ಅಡಿಕೆ, ತೆಂಗು, ಬಾಳೆ ಮತ್ತಿತರ ಕೃಷಿ ಫಸಲನ್ನು ತಿಂದು ಅಪಾರ ನಷ್ಟ ಉಂಟು ಮಾಡುತ್ತಿದ್ದು, ಕೃಷಿಕರ ಬದುಕೇ ದುಸ್ತರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಒಂಟಿಸಲಗವೊAದು ಗ್ರಾಮದಲ್ಲೇ ಬೀಡುಬಿಟ್ಟಿದ್ದು, ಜನ ಆತಂಕದಲ್ಲೇ ದಿನದೂಡುವಂತಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯ ಪಡುವಂತ್ತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

ಈಗಾಗಲೇ ಗ್ರಾಮಸ್ಥರು ಸಮಿತಿಯೊಂದನ್ನು ರಚಿಸಿಕೊಂಡು ಕಾಡಾನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮದಲ್ಲಿರುವ ಕಾಡಾನೆಯನ್ನು ಕಾಡಿಗೆ ಅಟ್ಟಬೇಕೆಂದು ಒತ್ತಾಯಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಮನವಿಗೆ ಯಾವುದೇ ಸ್ಪಂದನ ದೊರೆತ್ತಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಮುಂದಿನ ೪೮ ಗಂಟೆಗಳಲ್ಲಿ ಕಾಡಾನೆ ಹಿಡಿಯಲು ಅನುಮತಿ ಕೊಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಆ. ೧೦ರ ವರೆಗೆ ಕಾಲಾವಕಾಶ ನೀಡಿದ್ದು, ಆ.೧೧ ರಂದು ಸಂಪಾಜೆ ವಲಯ ಅರಣ್ಯಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.