*ಗೋಣಿಕೊಪ್ಪ, ಆ. ೮: ಪಿಸಿ ಕ್ಲಬ್, ಗೋಣಿಕೊಪ್ಪ ರೋಟರಿ ಕ್ಲಬ್ ಹಾಗೂ ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆ ಸಹಯೋಗದಲ್ಲಿ ತಾ. ೩೧ ರಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಜಿಲ್ಲಾಮಟ್ಟದ ಚೆಸ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಪಿ.ಸಿ. ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಆರ್. ಪ್ರದೀಪ್ ತಿಳಿಸಿದ್ದಾರೆ.

ಪ್ರಾಥಮಿಕ, ಪ್ರೌಡ ಮತ್ತು ಮುಕ್ತ ವಿಭಾಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾ. ೨೬ ರ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ. ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ನೀಡುವುದು ಕಡ್ಡಾಯವಾಗಿದೆ. ಚೆಸ್ ಬೋರ್ಡ್ ಕೂಡ ತರಬೇಕಿದೆ. ಮೆದುಳು ಚುರುಕುಗೊಳ್ಳಲು ಚೆಸ್ ಕ್ರೀಡೆ ಸಹಕಾರಿ. ಇದರಿಂದಾಗಿ ಪಾಲಕರು ಮಕ್ಕಳಲ್ಲಿ ಚೆಸ್ ಕ್ರೀಡೆಗೆ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು. ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಿ. ಆರ್. ವಿಜಯ ಮಾತನಾಡಿ, ಮಕ್ಕಳಲ್ಲಿ ಚೆಸ್ ಆಟಕ್ಕೆ ಪ್ರೋತ್ಸಾಹ ನೀಡಲು ಸಂಸ್ಥೆ ಬೆಂಬಲವಾಗಿ ನಿಂತಿದೆ ಎಂದರು. ಜೆಸಿಐ ಪೊನ್ನಂಪೇಟೆ ನಿಸರ್ಗ ಸಂಸ್ಥೆ ಅಧ್ಯಕ್ಷ ತೀತಮಾಡ ಡಿ. ನಿತಿನ್ ಮಾತನಾಡಿ, ಚೆಸ್ ಸ್ಪರ್ಧೆಯಲ್ಲಿ ಹೆಚ್ಚಿನ ಸ್ಪರ್ಧಿಗಳ ನಿರೀಕ್ಷೆ ಇದೆ. ಮಕ್ಕಳ ಪಾಲ್ಗೊಳ್ಳುವಿಕೆ ಮುಖ್ಯ ಎಂದರು. ಹೆಚ್ಚಿನ ಮಾಹಿತಿಗೆ ೯೪೪೮೩೮೩೯೧೦, ೯೯೦೦೯೨೭೦೯೫ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಪಿ.ಸಿ. ಕ್ಲಬ್ ಕಾರ್ಯದರ್ಶಿ ಆಂಟೋನಿ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಮೋದ್ ಕಾಮತ್ ಉಪಸ್ಥಿತರಿದ್ದರು.