ಸೋಮವಾರಪೇಟೆ, ಆ.. ೮: ರೈತರ ಕೃಷಿ ಭೂಮಿಯನ್ನು ಸಿ ಆ್ಯಂಡ್ ಡಿ ಹೆಸರಿನಲ್ಲಿ ಅರಣ್ಯ ಇಲಾಖೆಗೆ ಸೇರ್ಪಡೆಗೊಳಿಸುವುದಕ್ಕೆ ಸರ್ಕಾರ ಸೆಕ್ಷನ್-೪ ಸರ್ವೆಗೆ ಮುಂದಾಗಿರುವುದನ್ನು ಖಂಡಿಸಿ ತಾ.೧೨ರ ಮಂಗಳವಾರ ಸೋಮವಾರಪೇಟೆ ತಾಲೂಕು ಬಂದ್ ನಡೆಸಲಾಗುವುದು ಎಂದು ರೈತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಕೆ.ಬಿ. ಸುರೇಶ್ ಹೇಳಿದರು.

ತಾ.೧೧ ರಂದು ನಡೆಸಬೇಕಿದ್ದ ತಾಲೂಕು ಬಂದ್ ಅನ್ನು ತಾ.೧೨ಕ್ಕೆ ಮುಂದೂಡಲಾಗಿದ್ದು, ವರ್ತಕರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರೈತರು ಕೃಷಿ ಭೂಮಿಯನ್ನು ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕೊಡಗು ಜಿಲ್ಲೆಯಲ್ಲಿ ೨೫ ಸಾವಿರ ಎಕರೆಯಷ್ಟು ಭೂಮಿಯನ್ನು ಸಿ ಆ್ಯಂಡ್ ಡಿ ಹೆಸರಿನಲ್ಲಿ ರೈತರು ಕಳೆದುಕೊಳ್ಳಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ರೈತರು ಅನೇಕ ದಶಕಗಳ ಹಿಂದೆಯೇ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಇಲಾಖೆಗೆ ನಮೂನೆ ೫೦,೫೩,೫೭ ಅರ್ಜಿ ಸಲ್ಲಿಸಿಕೊಂಡು ಹಕ್ಕುಪತ್ರಕ್ಕಾಗಿ ಪರದಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಕೃಷಿ ಭೂಮಿಯನ್ನೇ ಸಿ ಆ್ಯಂಡ್ ಡಿ ಭೂಮಿಯೆಂದು ಸರ್ವೆಗೆ ಮುಂದಾಗಿರುವುದು ಖಂಡನೀಯ ಎಂದರು.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ರೈತರು ಸಿ ಆ್ಯಂಡ್ ಡಿ ಭೂಮಿಯಲ್ಲೇ ಕೃಷಿ ಮಾಡಿದ್ದಾರೆ. ಮನೆ ನಿರ್ಮಿಸಿಕೊಂಡಿದ್ದಾರೆ. ಭತ್ತ, ಕಾಫಿ, ಏಲಕ್ಕಿ, ಬಾಳೆ, ತರಕಾರಿ ಬೆಳೆಯುತ್ತಿದ್ದಾರೆ. ಈ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಸಿ ಆ್ಯಂಡ್ ಡಿ ವಿಷಯ ಚರ್ಚೆಯಾಗಿದ್ದು, ಉನ್ನತಮಟ್ಟದ ಸಮಿತಿ ರಚಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಅರಣ್ಯ, ಕಂದಾಯ ಸಚಿವರು ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಮಸ್ಯೆ ಬಗೆಹರಿಸಿಲ್ಲ. ಇವೆಲ್ಲಾ ಕಾರಣದಿಂದ ಹೋರಾಟ ಪ್ರಾರಂಭಿಸಲಾಗುವುದು ಎಂದು ಹೇಳಿದರು. ತಾ.೧೨ ರ ತಾಲೂಕು ಬಂದ್ ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ. ೧೯೭೪ರಲ್ಲಿ ಸರ್ಕಾರದ ಸುತ್ತೋಲೆಯಂತೆ ಸಿ ಆ್ಯಂಡ್ ಡಿ ಭೂಮಿ ಗುರುತು ಮಾಡಲಾಯಿತು. ಆದರೆ ಕಂದಾಯ ಅಧಿಕಾರಿಗಳು ಜಾಗದ ಸರ್ವೆ ಮಾಡದೆ ಕಚೇರಿಯಲ್ಲಿ ಕುಳಿತುಕೊಂಡೆ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಾಗವನ್ನು ಸಿ ಆ್ಯಂಡ್ ಡಿ ಭೂಮಿ ಎಂದು ಗುರುತಿಸಿ ಸರ್ಕಾರಕ್ಕೆ ಲಿಖಿತ ವರದಿ ಕೊಟ್ಟರು. ಸರ್ಕಾರ ಈ ಅವೈಜ್ಞಾನಿಕ ವರದಿಯನ್ನೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವುದರಿಂದ ರೈತರು ಭೂಮಿ ಕಳೆದುಕೊಳ್ಳುವ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ಸರ್ಕಾರ ಸಿ ಆ್ಯಂಡ್ ಡಿ ಭೂಮಿಯ ಸಮಸೈ ಬಗೆಹರಿಸಲು ಕೂಡಲೇ ಉನ್ನತಮಟ್ಟದ ಸಮಿತಿ ರಚಿಸಬೇಕು. ಸರ್ವೆ ಇಲಾಖೆ, ಕಂದಾಯ, ಅರಣ್ಯ ಇಲಾಖೆಗಳಿಂದ ಜಂಟಿ ಸರ್ವೆ ನಡೆಸಿ, ಸಿ ಆ್ಯಂಡ್ ಡಿಯನ್ನು ಗುರುತು ಮಾಡಬೇಕು ಎಂದು ಹೇಳಿದರು. ೧೯೭೪ರ ವರೆಗೆ ಎಲ್ಲಾ ಸರ್ಕಾರಗಳು ಆಡಳಿತ ಮಾಡಿವೆ. ಆದರೆ ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಹೇಳಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ರೈತರು ಒಗ್ಗಟ್ಟಾದರೆ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಬಹುದು. ತಾಲೂಕಿನ ಸಂಘ ಸಂಸ್ಥೆಗಳು ಬಂದ್‌ಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯರಾಮ್ ಇದ್ದರು.