ಮಡಿಕೇರಿ, ಜು. ೩೦ : ಬೆಂಗಳೂರಿನಲ್ಲಿ ವಾಸವಿರುವ ಕ್ಗ್ಗಟ್ನಾಡ್ ಕೊಡವ ಸಂಘದ ೫ನೇ ವರ್ಷದ ಒತ್ತೋರ್ಮೆ ಕೂಟ, ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿ ಶುಭಕೋರಿದರು. ಕಾರ್ಯಕ್ರಮಕ್ಕೆ ಶಾಸಕರನ್ನು ಸಮುದಾಯದ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಮಾತನಾಡಿದ ಶಾಸಕರು, ಕೊಡಗಿನ ಹಾಗೂ ಕೊಡವರ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ನಾಡಿನಾದ್ಯಂತ ಪಸರಿಸಲು ಇಂತಹ ಸಮ್ಮಿಲನ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುವಪೀಳಿಗೆಯ ಮೇಲೆ ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಆಚರಣೆಗಳನ್ನು ಮುಂದುವರಿಸುವ ಗುರುತರ ಜವಾಬ್ದಾರಿ ಇದೆ. ಆಧುನಿಕತೆಗೆ ಹೊಂದಿಕೊAಡು ನಮ್ಮ ಸಂಸ್ಕೃತಿಯನ್ನು ಪೋಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನಾಡಿನ ಏಳಿಗೆಗಾಗಿ ತನ್ನ ಕೈಲಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಇದೇ ಸಂದರ್ಭ ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಹಿರಿಯ ಪತ್ರಕರ್ತರಾದ ಎಂ. ಎ. ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಕ್ಗ್ಗಟ್ಟ್ ನಾಡ್ ಕೊಡವ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.