ಕಣಿವೆ, ಜು. ೨೩: ಕುಶಾಲನಗರ ಮಾರುಕಟ್ಟೆ ರಸ್ತೆಯ ನಾಗದೇವತೆ ದೇವಾಲಯ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ನೋವಲ್ಲಿ ದಿನಗಳೆಯುತ್ತಿದ್ದ ಬೀದಿ ನಾಯಿಯೊಂದಕ್ಕೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ದಂಪತಿ ನಾಯಿ ಕಾಣೆಯಾದ ಬಗ್ಗೆ ಆತಂಕಗೊAಡು ಅನ್ನಾಹಾರ ಬಿಟ್ಟು ಎಲ್ಲೆಡೆ ಹುಡುಕಾಟ ನಡೆಸುತ್ತಿರುವ ಬಗ್ಗೆ "ಶಕ್ತಿ"ಗೆ ಮಾಹಿತಿ ಲಭಿಸಿದೆ.
ಬೀದಿ ನಾಯಿಗಳಿಗೆಂದೇ ಏಕರೆಗಟ್ಟಲೆ ಭೂಮಿ ಖರೀದಿಸಿ ಅದರ ಸುತ್ತಲೂ ತಡೆಗೋಡೆ ನಿರ್ಮಿಸಿ ಅದರೊಳಗೆ ಬೀದಿ ನಾಯಿಗಳನ್ನು ಆರೈಕೆ ಮಾಡುತ್ತಿರುವ ಈ ವೈದ್ಯ ದಂಪತಿಗೆ ಯಾವುದೇ ಬೀದಿ ನಾಯಿಗಳನ್ನು ಕಂಡರೂ ಹೆಚ್ಚಿನ ಮಮತೆ - ಮಮಕಾರ.
ಹಾಗಾಗಿ ಕುಶಾಲನಗರದ ನಾಗದೇವತೆ ದೇವಾಲಯ ರಸ್ತೆಯ ಅಂಗಡಿಯೊAದರ ಬಳಿ ವಾಹನದ ಚಕ್ರಕ್ಕೆ ಸಿಲುಕಿ ನಲುಗಿದ್ದ ನಾಯಿಯೊಂದರ ಶೋಚನೀಯ ಸ್ಥಿತಿಯನ್ನು ಕಂಡು ಮಮ್ಮಲ ಮರುಗಿದ ಈ ವೈದ್ಯ ದಂಪತಿ ಈ ಶ್ವಾನಕ್ಕೆ ಆಪರೇಷನ್ ಮಾಡಿಸಿ ಅದರ ಕುತ್ತಿಗೆಗೆ ಹಸಿರು ಬಣ್ಣದ ಕಾಲರ್‌ವೊಂದನ್ನು ಅಳವಡಿಸಿದ್ದರು.
ಶ್ವಾನ ನಿತ್ಯವೂ ತಂಗುತ್ತಿದ್ದ ಅಂಗಡಿ ಮಾಲೀಕನಿಗೆ ಅದರ ನಿರ್ವಹಣೆ ಜವಾಬ್ದಾರಿ ನೀಡಿದ್ದ ವೈದ್ಯರು, ಪ್ರತಿದಿನವೂ ಅದಕ್ಕೆ ಚುಚ್ಚುಮದ್ದು ನೀಡಿದ ಪರಿಣಾಮ ಶ್ವಾನ ಒಂದಷ್ಟು ಚೇತರಿಸಿಕೊಂಡಿತ್ತು ಎನ್ನಲಾಗಿದೆ.
ಆದರೆ ಮರುದಿನ ವೈದ್ಯರು ಅಲ್ಲಿಗೆ ತೆರಳಿ ನೋಡಿದಾಗ ನಾಯಿ ಕಾಣೆಯಾಗಿದುದ್ದನ್ನು ಕಂಡು ಕಂಗಾಲಾದ ವೈದ್ಯ ದಂಪತಿಗೆ, ಯಾರೋ ಅಪರಿಚಿತರು ವಾಹನ ತಂದು ತುಂಬಿಕೊAಡು ಒಯ್ದ ಬಗ್ಗೆ ತಿಳಿಸಿದಾಗ ಆಘಾತಗೊಂಡಿದ್ದಾರೆ.
ತಕ್ಷಣವೇ ಕುಶಾಲನಗರ ಪುರಸಭೆಗೆ ಬಂದು ಪುರಸಭೆಯಿಂದ ಶ್ವಾನಗಳನ್ನು ಹಿಡಿಸಲಾಯಿತೆ ಎಂದು ಮಾಹಿತಿ ಪಡೆದಾಗ ಪುರಸಭೆಯಿಂದ ನಾವು ಹಿಡಿಸಿಲ್ಲ ಎಂಬ ಉತ್ತರ ಬಂದಿದೆ.
ಬಳಿಕ ಹಿಡಿದವರ ಬಗ್ಗೆ ಮಾಹಿತಿ ಕೇಳಿದಾಗ ಪುರಸಭೆ ಅಧಿಕಾರಿಗಳು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಂತರ ಇವರು ಕುಶಾಲನಗರ ಹೊರವಲಯದ ಹಲವಾರು ಕಡೆಗೆ ತೆರಳಿ ನೋಡಿದರೂ ಶ್ವಾನದ ಸುಳಿವು ಸಿಗಲಿಲ್ಲ.
ಬಳಿಕ ಇವರ ಬಳಿ ಚಿಕಿತ್ಸೆಗೆ ನಿತ್ಯವೂ ಧಾವಿಸುವ ವ್ಯಕ್ತಿಯೊಬ್ಬ ಶ್ವಾನವನ್ನು ಹಿಡಿದು ಒಯ್ದ ವಾಹನದ ನಂಬರ್ ಹಾಗೂ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದು, ತಾವು ಆರೈಕೆ ಮಾಡಿ ಕಾಲು ಬರುವಂತೆ ಶಸ್ತçಚಿಕಿತ್ಸೆ ಮಾಡಿಸಿದ್ದ ನಾಯಿ ಕಾಣುವವರೆಗೂ ನೀರನ್ನೂ ಕೂಡ ಕುಡಿಯಬಾರದೆಂದು ನಿರ್ಧರಿಸಿದ ಈ ವೈದ್ಯ ದಂಪತಿ ನೆರೆಯ ಪಿರಿಯಾಪಟ್ಟಣ ತಾಲೂಕಿನ ಬಹುತೇಕ ಗ್ರಾಮಗಳು, ಬೂದಿತಿಟ್ಟು, ಆನೆಚೌಕೂರು ಅರಣ್ಯದ ಗಡಿ ಗ್ರಾಮಗಳಾದಿಯಾಗಿ ಎಲ್ಲೆಡೆ ಹುಡುಕಿದರೂ ಶ್ವಾನದ ಸುಳಿವು ದೊರಕುವುದೇ ಇಲ್ಲ.
ಬಳಿಕ ವಾಹನದಲ್ಲಿ ಇದ್ದ ಓರ್ವ ವ್ಯಕ್ತಿಯನ್ನು ಪತ್ತೆಹಚ್ಚಿ ‘ನೀನು ಎಷ್ಟು ಹಣ ಬೇಕಾದರೂ ಕೇಳು ಕೊಡ್ತೇನೆ. ನನಗೆ ನಾನು ಚಿಕಿತ್ಸೆ ನೀಡುತ್ತಿದ್ದ ನಾಯಿ ಎಲ್ಲಿದೆ ಎಂದು ಹೇಳಪ್ಪಾ. ಬಾಪ್ಪಾ ಎಲ್ಲಿ ಬಿಟ್ಟಿದ್ದಾರೆ ತೋರಿಸು’ ಎಂದು ಅಂಗಲಾಚಿದ್ದಾರೆ.
ಕೊನೆಗೆ ಆ ವ್ಯಕ್ತಿ ಈ ವೈದ್ಯರ ಸಂಕಟ - ನೋವು ನೋಡಲಾಗದೆ ಬೂದಿತಿಟ್ಟು ಬಳಿ ಹೋಗಿ ನೋಡಿದರೂ ಅಲ್ಲಿ ಯಾವುದೇ ಶ್ವಾನಗಳ ಸುಳಿವು ಸಿಗಲಿಲ್ಲ.
ಇದೀಗ ಈಗ ವೈದ್ಯ ದಂಪತಿ ಅದೇ ಶ್ವಾನದ ಕೊರಗಿನಲ್ಲಿದ್ದಾರೆ. ಶ್ವಾನ ಒಯ್ದ ವ್ಯಕ್ತಿಗಳು ಎಲ್ಲಿ ಬಿಟ್ಟಿದ್ದಾರೆ ಎಂಬ ನಿಖರ ಮಾಹಿತಿ ನೀಡಿದರೆ ಅಲ್ಲಿ ಇವರ ಪ್ರೀತಿಪಾತ್ರ ಊನಗೊಂಡ ಶ್ವಾನ ಕಂಡುಬAದರೆ ಸೂಕ್ತ ಬಹುಮಾನವನ್ನು ಕೂಡ ನೀಡುವುದಾಗಿ ಕೋರಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ವೈದ್ಯ ದಂಪತಿಗಳು ಬೀದಿ ನಾಯಿಯೊಂದಕ್ಕೆ ತಲಾ ರೂ. ೮ ಸಾವಿರ ಖರ್ಚು ಮಾಡಿ ಮೈಸೂರಿಗೆ ಕರೆದೊಯ್ದು ೨೫ಕ್ಕೂ ಹೆಚ್ಚಿನ ಶ್ವಾನಗಳಿಗೆ ಸಂತಾನಹರಣ ಶಸ್ತçಚಿಕಿತ್ಸೆ ಮಾಡಿಸಿದ್ದಾರೆ.
ಶಸ್ತçಚಿಕಿತ್ಸೆ ಬಳಿಕ ಅಲ್ಲೇ ಮೂರು ದಿನ ಆಸ್ಪತ್ರೆಯಲ್ಲಿಯೇ ಅವುಗಳನ್ನು ಅಡ್ಮಿಟ್ ಮಾಡಿ ಬಳಿಕ ಕುಶಾಲನಗರಕ್ಕೆ ತಂದು ಅವುಗಳನ್ನು ಬಿಟ್ಟಿದ್ದಾರೆ. ಹೀಗಾಗಿ ಈ ೨೫ ಬೀದಿ ನಾಯಿಗಳು ಜನ್ಮ ಕೊಡಬಹುದಾಗಿದ್ದ ಸುಮಾರು ೨೫೦ಕ್ಕೂ ಹೆಚ್ಚಿನ ನಾಯಿಗಳ ಸಂತಾನವನ್ನು ಈ ವೈದ್ಯ ದಂಪತಿ ಕಡಿಮೆಮಾಡುವ ಮೂಲಕ ಪುರಸಭೆಗೆ ಪರೋಕ್ಷವಾಗಿ ನೆರವಾಗಿದ್ದಾರೆ.
ಬೀದಿನಾಯಿಗಳ ಹಾವಳಿಯ ಬಗ್ಗೆ ಸಾರ್ವಜನಿಕರು ಪುರಸಭೆಗೆ ದೂರು ನೀಡುವುದು ಸರ್ವೇ ಸಾಮಾನ್ಯ ಸಂಗತಿ. ಆದರೆ, ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ, ಸಂತಾನ ಹರಣ ಶಸ್ತçಚಿಕಿತ್ಸೆ ಸೇರಿದಂತೆ ಅವುಗಳ ನಿರ್ವಹಣೆಗೆಂದು ಸರ್ಕಾರದಿಂದ ಪುರಸಭೆ ಅಥವಾ ಪಂಚಾಯಿತಿಗಳಿಗೆ ಬರುವ ಅನುದಾನಗಳ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗುತ್ತದೆ.
ಈ ವಿಚಾರದಲ್ಲಿ ಕುಶಾಲನಗರ ಪುರಸಭೆ ಇನ್ನು ಮುಂದಾದರೂ ಬೀದಿ ನಾಯಿಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಯಾರೋ ಅಪರಿಚಿತರು ವಾಹನ ತಂದು ಬೀದಿ ನಾಯಿಗಳನ್ನು ತುಂಬಿಸಿ ಒಯ್ದರೂ ಕೂಡ ತಮ್ಮ ಅರಿವಿಗೆ ಬಂದಿಲ್ಲ ಎಂದು ಹೇಳುವುದಾದರೇ ಪುರಸಭೆ ವ್ಯಾಪ್ತಿಯಲ್ಲಿ ಬೇರೆ ಇನ್ನಾವುದೇ ಅಕ್ರಮಗಳು ನಡೆದರೂ ಇದೇ ರೀತಿಯ ಉತ್ತರ ಕೊಡುತ್ತಾರಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ದಿನವೊಂದಕ್ಕೆ ನೂರಾರು ಸಂಖ್ಯೆಯಲ್ಲಿ ದೂರದ ಸ್ಥಳಗಳಿಂದ ಮುಂಗಡ ಅಪಾಯಿಂಟ್‌ಮೆAಟ್ ತೆಗೆದುಕೊಂಡು ಬಂದು ದಿನಗಟ್ಟಲೇ ಕಾದು ಚಿಕಿತ್ಸೆ ಪಡೆದುಕೊಳ್ಳುವ ಪ್ರತಿಷ್ಠಿತ ಕ್ಲಿನಿಕ್ ಹೊಂದಿರುವ ಈ ವೈದ್ಯ ದಂಪತಿ ಈ ಶ್ವಾನದ ಮೇಲಿನ ಅತೀವ ಕಾಳಜಿ ಹಾಗೂ ಮಮಕಾರದಿಂದ ತಮ್ಮ ಕ್ಲಿನಿಕ್‌ನ್ನು ಮುಚ್ಚಿ ಶ್ವಾನದ ಪತ್ತೆಗಾಗಿ ಓಡಾಡುತ್ತಾರೆ ಅಂದರೆ ಅವರಿಗೆ ಆ ಶ್ವಾನದ ಮೇಲಿರುವ ಬಾಂಧವ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
ಈ ಬಗ್ಗೆ ಈ ವೈದ್ಯರಲ್ಲಿ ಮಾಹಿತಿಗಾಗಿ "ಶಕ್ತಿ" ಕರೆ ಮಾಡಿದಾಗ ಶ್ವಾನದ ವಿಚಾರ ಹೇಳುತ್ತಾ ಭಾವುಕರಾದರು.
- ಕೆ.ಎಸ್. ಮೂರ್ತಿ