ಜುಲೈ ೨೩ ರಾಷ್ಟಿçÃಯ ಪ್ರಸಾರ ದಿನ. ೧೯೨೭ರಲ್ಲಿ ಈ ದಿನದಂದು ನಮ್ಮ ದೇಶದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರಸಾರವನ್ನು ಔಪಚಾರಿಕವಾಗಿ ಆರಂಭಿಸಲಾಯಿತು. ಹಾಗೆ ನೋಡಿದರೆ, ಭಾರತದಲ್ಲಿ ಬಾನುಲಿ ಪ್ರಸಾರದ ಚಟುವಟಿಕೆಗಳು ಗರಿಗೆದರಿದ್ದು ೧೯೨೦ರ ಕಾಲದಲ್ಲಿ. ಆಗಿನ ಬೊಂಬಾಯಿ ಹಾಗೂ ಕಲ್ಕತ್ತಾದ ಕೆಲವು ಹವ್ಯಾಸಿ ಖಾಸಗಿ ಸಂಸ್ಥೆಗಳು ರೇಡಿಯೋ ಯುಗಕ್ಕೆ ನಾಂದಿ ಹಾಡಲು ತೊಡಗಿದ್ದವು. ಪ್ರಾಯೋಗಿಕವಾಗಿ ೧೯೨೧ರಲ್ಲಿ ಬೊಂಬಾಯಿಯ ಟೈಮ್ಸ್ ಆಫ್ ಇಂಡಿಯಾ ಕಟ್ಟಡದ ಮೇಲಿನಿಂದ ಮೊತ್ತಮೊದಲ ಬಾರಿಗೆ ಬಾನುಲಿ ಉಲಿಯಿತು. ಆದರೆ ಆಗಿನ್ನೂ ರೇಡಿಯೋ ಪ್ರಸಾರಕ್ಕಾಗಿ ಭಾರತಕ್ಕೆ ಪರವಾನಗಿ ಲಭಿಸಿರಲಿಲ್ಲ. ೧೯೨೨ರಲ್ಲಿ ಪರವಾನಗಿ ಸಿಕ್ಕಿತು. ಮರುವರ್ಷವೇ ಬೊಂಬಾಯಿಯ ಹವ್ಯಾಸಿ ರೇಡಿಯೋ ಕ್ಲಬ್ ಕಾರ್ಯೋನ್ಮುಖವಾಯಿತು. ಪರವಾನಗಿ ದೊರೆತ ಐದು ವರ್ಷಗಳ ತರುವಾಯ ಸಾಂಸ್ಥಿಕವಾಗಿ, ವ್ಯವಸ್ಥಿತವಾಗಿ ಭಾರತದಲ್ಲಿ ರೇಡಿಯೋ ಪ್ರಸಾರ ಆರಂಭವಾಗಿದ್ದು ೧೯೨೭ರ ಜುಲೈ ೨೩ರಂದು. ‘ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಐಬಿಸಿ) ಎಂಬ ಹೆಸರಲ್ಲಿ ಖಾಸಗಿ ಸಂಸ್ಥೆಯೊAದು ರಚನೆಗೊಂಡು, ಅಂದಿನ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು ಬೊಂಬಾಯಿ ಕೇಂದ್ರದಿAದ ಪ್ರಸಾರ ಆರಂಭಿಸಿತು. ಭಾರತದಲ್ಲಿ ಬ್ರಿಟಿಷ್ ವೈಸ್‌ರಾಯ್ ಆಗಿದ್ದ ಲಾರ್ಡ್ ಇರ್ವಿನ್ ಈ ರೇಡಿಯೋ ಕೇಂದ್ರವನ್ನು ಉದ್ಘಾಟಿಸಿದರು. ಹೀಗೆ ಜುಲೈ ೨೩ ರಂದು ರೇಡಿಯೋ ಪ್ರಸಾರ ಅಧಿಕೃತವಾಗಿ ಜನ್ಮ ತಾಳಿತು. ಅದಾದ ಒಂದು ತಿಂಗಳ ನಂತರ ಆಗಸ್ಟ್ ೨೬ರಂದು ಕಲ್ಕತ್ತಾದಿಂದಲೂ ರೇಡಿಯೋ ಪ್ರಸಾರ ಆರಂಭವಾಯಿತು. ಆದರೆ ಐಬಿಸಿ ಪ್ರಸಾರ ಶುರು ಮಾಡಿದ ಮೂರೇ ವರ್ಷಗಳ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು. ಇದರಿಂದಾಗಿ ಈ ಖಾಸಗಿ ಸಂಸ್ಥೆಗೆ ಕಾಯಕಲ್ಪ ನೀಡಲು ಬ್ರಿಟಿಷ್ ಸರಕಾರ ಮುಂದಾಯಿತು. ಐಬಿಸಿ ಪ್ರಸಾರ ವ್ಯವಸ್ಥೆಯ ಜವಾಬ್ದಾರಿಯನ್ನು ಸರಕಾರ ವಹಿಸಿಕೊಂಡು ೧೯೩೦ರಲ್ಲಿ ಇಂಡಿಯನ್ ಸ್ಟೇಟ್ ಬ್ರಾಡ್‌ಕಾಸ್ಟಿಂಗ್ ಕಂಪೆನಿ (ಐಎಸ್‌ಬಿಸಿ) ಎಂಬ ಹೆಸರಲ್ಲಿ ಪ್ರಸಾರಕ್ಕೆ ಹೆಗಲು ಕೊಟ್ಟಿತು. ಈ ಸಂಸ್ಥೆಯ ಮೊದಲ ಕಂಟ್ರೋಲರ್ ಆಗಿದ್ದ ಲಿಯೋನಲ್ ಫೀಲ್ಡನ್ ಎಂಬಾತ ೧೯೩೬ರ ಜೂನ್ ೮ರಂದು ಆಲ್ ಇಂಡಿಯಾ ರೇಡಿಯೋ (ಏರ್) ಎಂದು ಮರು ನಾಮಕರಣ ಮಾಡಿದ.
ಕರ್ನಾಟಕದಲ್ಲಿ (ಅಂದಿನ ಮೈಸೂರು ರಾಜ್ಯ) ಮೊತ್ತ ಮೊದಲ ರೇಡಿಯೋ ಪ್ರಸಾರ ಆರಂಭವಾಗಿದ್ದು ಸಂಗೀತ, ಸಾಹಿತ್ಯ, ಸಂಸ್ಕೃತಿಯ ನೆಲೆಬೀಡಾದ ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಡಾ ಎಂ.ವಿ. ಗೋಪಾಲಸ್ವಾಮಿ ಅವರು ಕೆ.ಆರ್.ಎಸ್. ರಸ್ತೆಯ ಒಂಟಿಕೊಪ್ಪಲಿನ ತಮ್ಮ ನಿವಾಸದಲ್ಲೇ ರೇಡಿಯೋ ಕೇಂದ್ರವನ್ನು ಪ್ರಾರಂಭಿಸಿದರು.೧೯೩೫ರ ಸೆಪ್ಟೆಂಬರ್ ೧೦ ರಂದು ಈ ಖಾಸಗಿ ರೇಡಿಯೋ ಕೇಂದ್ರವು ಪ್ರಸಾರವನ್ನು ಆರಂಭಿಸಿತು. ಗೋಪಾಲಸ್ವಾಮಿಯವರು ವಿದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ತಂದ ೩೦ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಸಿ ಈ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಗೋಪಾಲಸ್ವಾಮಿ ಅವರ ಪ್ರಯತ್ನಕ್ಕೆ ಕೈಜೋಡಿಸಿದವರಲ್ಲಿ ಪ್ರಮುಖವಾಗಿ ಹೆಸರಾಂತ ಸಾಹಿತಿಗಳಾದ ನಾ. ಕಸ್ತೂರಿ, ಎ.ಎನ್. ಮೂರ್ತಿರಾವ್ ಮೊದಲಾದವರ ಸೇವೆ ಗಣನೀಯ. ರಾಷ್ಟçಕವಿ ಕುವೆಂಪು ಅವರು ಕವನ ವಾಚನ ಮಾಡುವ ಮೂಲಕ ಮೊದಲ ರೇಡಿಯೋ ಪ್ರಸಾರ ಬಿತ್ತರಗೊಂಡಿತು. ರೇಡಿಯೋ ಸೆಟ್‌ಗಳ ಸೌಲಭ್ಯ ಹೆಚ್ಚಾಗಿ ಇರದಿದ್ದ ಆ ದಿನಗಳಲ್ಲಿ ಮೈಸೂರಿನ ಟೌನ್‌ಹಾಲ್ ಸಮೀಪದ ದೊಡ್ಡ ಗಡಿಯಾರದ ಕಂಬಕ್ಕೆ ಧ್ವನಿವರ್ಧಕವನ್ನು ಕಟ್ಟಿ ಸಾರ್ವಜನಿಕರಿಗೆ ಕಾರ್ಯಕ್ರಮಗಳನ್ನು ಕೇಳಿಸುವ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಭಾರತದಲ್ಲಿ ಖಾಸಗಿಯಾಗಿ ಏಕವ್ಯಕ್ತಿಯಿಂದ ಸ್ಥಾಪನೆಗೊಂಡ ಮೊತ್ತಮೊದಲ ರೇಡಿಯೋ ಕೇಂದ್ರ ಎಂಬ ಹೆಗ್ಗಳಿಕೆಗೆ ಮೈಸೂರು ಆಕಾಶವಾಣಿ ನಿಲಯ ಪಾತ್ರವಾಗಿದೆ. ಅಂದಿನ ಪ್ರಾಯೋಗಿಕ ಬಾನುಲಿ ಪ್ರಸಾರದಲ್ಲಿ ಮಕ್ಕಳಿಗಾಗಿ ಕಥೆ, ಕವನಗಳನ್ನು ಹೇಳುತ್ತಿದ್ದವರು ಜಿ.ಪಿ. ರಾಜರತ್ನಂ ಅವರು. ಆ ದಿನಗಳಲ್ಲಿ ಪ್ರಸಾರವಾದ ಪ್ರಪ್ರಥಮ ಸಂಗೀತ ಕಾರ್ಯಕ್ರಮವೆಂದರೆ ಮೈಸೂರು ವಾಸುದೇವಾಚಾರ್ಯರ ಹಾಡುಗಾರಿಕೆ. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವತಃ ಮಹಾರಾಜ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಬಾನುಲಿಯಲ್ಲಿ ಅಲೆ ಅಲೆಯಾಗಿ ತೇಲಿ ಬರುತ್ತಿರುವ ಧ್ವನಿಯನ್ನು ಕೇಳಿಸಿಕೊಂಡರು.
ಭಾರತೀಯ ಪ್ರಸಾರ ವ್ಯವಸ್ಥೆಗೆ ಮೈಸೂರು ಬಾನುಲಿ ಕೇಂದ್ರದ ಅಮೂಲ್ಯ ಕೊಡುಗೆ ಎಂದರೆ ಅದು ‘ಆಕಾಶವಾಣಿ' ಎಂಬ ಅಭಿದಾನ. ರೇಡಿಯೋ ಕೇಂದ್ರಕ್ಕೆ ಸೂಕ್ತವಾದ ಹೆಸರನ್ನು ಇರಿಸುವ ಸಲುವಾಗಿ ಮೈಸೂರಿನ ಮಹಾರಾಜ ಕಾಲೇಜಿನ ಹಲವಾರು ಪ್ರಾಧ್ಯಾಪಕರನ್ನು ಕರೆಸಿ ಚರ್ಚೆ ನಡೆಸಿದ ಗೋಪಾಲಸ್ವಾಮಿ ಅವರಿಗೆ ಆಕಾಶವಾಣಿ ಎಂಬ ಹೆಸರನ್ನು ಸೂಚಿಸಿದವರು ನಾ.ಕಸ್ತೂರಿ ಅವರು. ನಂತರ ಪ್ರಸಿದ್ಧ ಹಿಂದಿ ಸಾಹಿತಿ, ಕವಿ ಪಂಡಿತ್ ನರೇಂದ್ರ ಶರ್ಮಾ ಅವರ ಸಲಹೆಯ ಮೇರೆಗೆ ೧೯೫೬ ರಲ್ಲಿ ಭಾರತ ಸರ್ಕಾರವು ‘ಆಲ್ ಇಂಡಿಯಾ ರೇಡಿಯೋ' ಎಂಬ ಹೆಸರನ್ನು ಆಕಾಶವಾಣಿ ಎಂದು ನಾಮಕರಣ ಮಾಡಿತು. ಹೀಗಾಗಿ ಭಾರತೀಯ ಪ್ರಸಾರ ವ್ಯವಸ್ಥೆಯ ಇತಿಹಾಸದಲ್ಲಿ 'ಆಕಾಶವಾಣಿ' ಎಂಬ ಹೆಸರು ನೀಡಿದ ಅಭಿಖ್ಯಾನ ಕನ್ನಡಿಗರದ್ದು ಎಂಬುದು ಹೆಮ್ಮೆಯ ವಿಚಾರ.
ಸ್ವಾತಂತ್ರಾö್ಯ ನಂತರದ ಆರಂಭಿಕ ದಿನಗಳಲ್ಲಿ ಭಾರತದಲ್ಲಿದ್ದ ರೇಡಿಯೋ ಕೇಂದ್ರಗಳ ಸಂಖ್ಯೆ ಆರು ಮಾತ್ರ. ದೆಹಲಿ, ಬೊಂಬಾಯಿ, ಕಲ್ಕತ್ತಾ, ಮದ್ರಾಸ್, ತಿರುಚಿರಾಪಳ್ಳಿ, ಲಕ್ನೋ ಕೇಂದ್ರಗಳು. ೧೯೫೦ ಜನವರಿ ೨೬ ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಅದರಂತೆ ಆಕಾಶವಾಣಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು. ನಂತರದ ವರ್ಷಗಳಲ್ಲಿ ದೇಶದ ಅನೇಕ ಕಡೆಗಳಲ್ಲಿ ರೇಡಿಯೋ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತು. ಇಂದು ದೇಶದ ಹಲವಾರು ಪ್ರಾದೇಶಿಕ ಭಾಷೆಗಳ ಮೂಲಕ ರೇಡಿಯೋ ಕಾರ್ಯಕ್ರಮಗಳು ಮನೆಮನೆಗಳಿಗೂ ತಲುಪುತ್ತಿದ್ದು ಆಕಾಶವಾಣಿ ಎಂಬ ಮಾಧ್ಯಮವು ಭಾರತ ಮಾತ್ರವಲ್ಲ, ವಿಶ್ವದ ಅತಿದೊಡ್ಡ ಪ್ರಸಾರ ಜಾಲಗಳಲ್ಲಿ ಒಂದಾಗಿದೆ. ಪ್ರಸಾರ ವ್ಯವಸ್ಥೆಯ ಒಂದೊAದೇ ಮಜಲುಗಳನ್ನು ಯಶಸ್ವಿಯಾಗಿ ಹಾದು ಬಂದ ಆಕಾಶವಾಣಿಯು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ೧೯೫೨ರಲ್ಲಿ ರಾಷ್ಟಿçÃಯ ಸಂಗೀತ ಕಾರ್ಯಕ್ರಮ, ೧೯೫೪ರಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ ಕಾರ್ಯಕ್ರಮ ಆರಂಭವಾದವು. ರೇಡಿಯೋ ಸಿಲೋನ್ ಕೇಂದ್ರದ ಮನರಂಜನಾ ಕಾರ್ಯಕ್ರಮದ ಪೈಪೋಟಿ ಎದುರಿಸಲು ೧೯೫೭ರಲ್ಲಿ ಮುಂಬೈ ನಿಲಯದಿಂದ ವಿವಿಧ್ ಭಾರತಿ ಕಾರ್ಯಕ್ರಮದ ಪ್ರಸಾರವನ್ನು ಆರಂಭಿಸಲಾಯಿತು. ೧೯೭೭ರಲ್ಲಿ ರಾಷ್ಟಿçÃಯ ಪ್ರಸಾರ ದಿನದಂದೇ ಮೊತ್ತಮೊದಲ ಎಫ್.ಎಂ. ಕೇಂದ್ರವನ್ನು ಮದ್ರಾಸ್‌ನಲ್ಲಿ ಪ್ರಾರಂಭಿಸಲಾಯಿತು. ೧೯೮೪ರಲ್ಲಿ ತಮಿಳುನಾಡಿನ ನಾಗರಕೋಯಿಲಿನಲ್ಲಿ ಪ್ರಪ್ರಥಮವಾಗಿ ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಯಾಯಿತು. ೧೯೯೭ನೇ ವರ್ಷವು ರೇಡಿಯೋ ಮತ್ತು ಟಿ.ವಿ. ಮಾಧ್ಯಮಕ್ಕೆ ಮಹತ್ತರವಾದ ವರ್ಷ. ಇದೇ ವರ್ಷ ಮಾಧ್ಯಮಗಳಿಗೆ ಸ್ವಾಯತ್ತತೆ ನೀಡಿ ಸರಕಾರಿ ನಿಯಂತ್ರಣಗಳಿAದ ಮುಕ್ತಗೊಳಿಸುವ ಪ್ರಸಾರ ಭಾರತಿ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿತು. ಇದರಿಂದಾಗಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಪೂರ್ಣ ಸ್ವಾಯತ್ತತೆಯನ್ನು ಪಡೆದುಕೊಂಡವು.
ಟಿ.ವಿ. ಮಾಧ್ಯಮ, ಕೇಬಲ್, ಇಂಟರ್‌ನೆಟ್, ಡಿಟಿಹೆಚ್ ಪ್ರಸಾರ ವ್ಯವಸ್ಥೆಗಳ ಭರಾಟೆಯಿಂದಾಗಿ ಧ್ವನಿಸಂವಹನದ ಸಾಮ್ರಾಟನಾಗಿ ಮೆರೆಯುತ್ತಿದ್ದ ಆಕಾಶವಾಣಿಯ ಶ್ರೋತೃಗಳ ಸಂಖ್ಯೆ ಒಂದಷ್ಟು ಕುಸಿತಗೊಂಡಿದ್ದರೂ ೨೦೦೦ನೇ ದಶಕದಲ್ಲಿ ಖಾಸಗಿ ರೇಡಿಯೋ ಕೇಂದ್ರಗಳು ಪ್ರವೇಶ ಪಡೆದಿದ್ದರಿಂದ ಆಕಾಶವಾಣಿ ಮತ್ತೆ ಮೈಕೊಡವಿ ಎದ್ದು ನಿಂತಿತು. ನೂತನ ಎಫ್.ಎಂ. ಕೇಂದ್ರಗಳು ಹೊಸ ಅಲೆಯನ್ನೇ ಎಬ್ಬಿಸಿ ಕೇಳುಗರನ್ನು ತನ್ನತ್ತ ಸೆಳೆಯತೊಡಗಿದವು. ೨೦೦೧ರಲ್ಲಿ ಪ್ರಪ್ರಥಮವಾಗಿ ಖಾಸಗಿ ಎಫ್.ಎಂ. ರೇಡಿಯೋ ಕೇಂದ್ರ ಬೆಂಗಳೂರಿನಲ್ಲಿ ಪ್ರಸಾರ ಆರಂಭಿಸಿತು.
ಕರ್ನಾಟಕದಲ್ಲಿ ಇಂದು ಪ್ರಮುಖವಾಗಿ ಒಟ್ಟು ೧೪ ಆಕಾಶವಾಣಿ ಕೇಂದ್ರಗಳು ಸೇರಿದಂತೆ ಅನೇಕ ಖಾಸಗಿ ರೇಡಿಯೋ ಕೇಂದ್ರಗಳಿವೆ. ಬೆಂಗಳೂರು, ಮೈಸೂರು ಆಕಾಶವಾಣಿ ಕೇಂದ್ರಗಳ ಸಾಲಿಗೆ ಸೇರುವ ಹಳೆಯ ಕೇಂದ್ರಗಳೆAದರೆ ಧಾರವಾಡ, ಭದ್ರಾವತಿ, ಕಲಬುರ್ಗಿ ಹಾಗೂ ಮಂಗಳೂರು. ಇನ್ನುಳಿದಂತೆ ೯೦ರ ದಶಕದಲ್ಲಿ ಪ್ರಾರಂಭವಾದ ಎಫ್.ಎಂ. ಕೇಂದ್ರಗಳು. ಕರ್ನಾಟಕದಲ್ಲಿ ಮೊತ್ತ ಮೊದಲು (೧೯೯೧ ಮೇ ೩ ರಂದು) ಆರಂಭವಾದ ಎಫ್.ಎಂ ಆಕಾಶವಾಣಿ ಕೇಂದ್ರ ಚಿತ್ರದುರ್ಗ. ಇದಾದ ಒಂದೇ ದಿನದ ಅಂತರದಲ್ಲಿ ಹಾಸನ ಕೇಂದ್ರ ಆರಂಭವಾಯಿತು. ನಂತರದ ವರ್ಷಗಳಲ್ಲಿ ಹೊಸಪೇಟೆ, ಏಕಕಾಲಕ್ಕೆ ಮಡಿಕೇರಿ ಹಾಗೂ ರಾಯಚೂರು (೧೯೯೩ ಆಗಸ್ಟ್ ೨೮), ನಂತರ ಕ್ರಮೇಣವಾಗಿ ಕಾರವಾರ, ಬಿಜಾಪುರ, ಬಳ್ಳಾರಿ ಆಕಾಶವಾಣಿ ಕೇಂದ್ರಗಳು ಆರಂಭವಾದವು. ಮೈಸೂರಿನಲ್ಲಿ ೧೯೩೫ರಲ್ಲೇ ಮೊತ್ತಮೊದಲ ರೇಡಿಯೋ ಕೇಂದ್ರ ಕಾರ್ಯಾರಂಭಗೊAಡರೂ ೧೯೫೫ರಲ್ಲಿ ಅಲ್ಲಿನ ಯಂತ್ರೋಪಕರಣಗಳು, ಸಿಬ್ಬಂದಿಗಳು ಸೇರಿ ಅದು ಬೆಂಗಳೂರಿಗೆ ವರ್ಗಾಯಿಸಲ್ಪಟ್ಟು ಬೆಂಗಳೂರು ಆಕಾಶವಾಣಿ ರೂಪುಗೊಂಡಿತು. ಹೀಗೆ ಮುಚ್ಚಲ್ಪಟ್ಟ ಮೈಸೂರು ರೇಡಿಯೋ ಕೇಂದ್ರವು ೧೯ ವರ್ಷಗಳ ನಂತರ ೧೯೭೪ರಲ್ಲಿ ಮರಳಿ ಪುನರಾರಂಭಗೊAಡಿತು. ಕನ್ನಡ ನಾಡಿನ ಅತ್ಯಂತ ಹಳೆಯ ಆಕಾಶವಾಣಿಯಾದ ಮೈಸೂರು ಕೇಂದ್ರದ ಸ್ಟುಡಿಯೋ ವಿನ್ಯಾಸವನ್ನು ವಿನೂತನ ಶೈಲಿಯಲ್ಲಿ ರೂಪಿಸಿದವರು ಜರ್ಮನಿಯ ತಂತ್ರಜ್ಞ ಆಟ್ಟೊ ಕೊನಿಸ್ ಬರ್ಗ್. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಝಾ ಇಸ್ಮಾಯಿಲ್ ಅವರು ಆಟ್ಟೊ ಕೊನಿಸ್ ಬರ್ಗ್ ಅವರನ್ನು ಆಹ್ವಾನಿಸಿ ರೇಡಿಯೋ ಕೇಂದ್ರದ ನಿರ್ಮಾಣ ಮಾಡಿಸಿದರು. ಭಾರತದಲ್ಲಿ ಮೈಸೂರಿನ ಆಕಾಶವಾಣಿ ಕೇಂದ್ರದಲ್ಲಿ ಮಾತ್ರ ಹೆಕ್ಸಾಗನಲ್( ಷಟ್ಕೋನ) ಆಕೃತಿಯಲ್ಲಿ ಆರು ಸ್ಟುಡಿಯೋ ಒಳಗೊಂಡAತೆ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.
ಮಕ್ಕಳು, ಮಹಿಳೆಯರು, ಯುವ ಕೇಳುಗರು ಸೇರಿದಂತೆ ಎಲ್ಲ ವಯೋಮಾನದವರಿಗಾಗಿ ಶಿಕ್ಷಣ, ಆರೋಗ್ಯ, ಕೃಷಿ, ಕಾನೂನು, ಕ್ರೀಡೆ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಿಗೆ ಸಂಬAಧಿಸಿದ ಕಾರ್ಯಕ್ರಮಗಳು, ಸಂಗೀತಪ್ರಿಯರಿಗಾಗಿ ಶಾಸ್ತ್ರೀಯ ಸಂಗೀತ, ಭಕ್ತಿಸಂಗೀತ, ಭಾವಗೀತೆಗಳು, ಜನಪದಗೀತೆಗಳು, ಚಿತ್ರಗೀತೆಗಳು, ಭಾಷಣ, ನಾಟಕ, ಕಥಾ, ಯಕ್ಷಗಾನ ಎಲ್ಲವೂ 'ಒಂದೇ ಸೂರಿನಡಿಯಲ್ಲಿ' ಎಂಬAತೆ ಭಾರತದ ಹಲವು ಭಾಷೆಗಳಲ್ಲಿ ಆಕಾಶವಾಣಿಯ ವಿವಿಧ ಕೇಂದ್ರಗಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬಂದಿವೆ. ಋಗ್ವೇದದಲ್ಲಿ ಬರುವ 'ಬಹುಜನ ಹಿತಾಯ, ಬಹುಜನ ಸುಖಾಯ' ಎಂಬುದು ಆಕಾಶವಾಣಿಯ ಧ್ಯೇಯ ವಾಕ್ಯವಾಗಿದೆ. ಅದರಂತೆ ಸರ್ವರ ಕಲ್ಯಾಣಕ್ಕಾಗಿ, ಸರ್ವರ ಸಂತೋಷಕ್ಕಾಗಿ ಸರ್ವಾಂತರ್ಯಾಮಿಯಾಗಿ ಅಂದಿಗೂ ಇಂದಿಗೂ ತನ್ನ ಅಸ್ಮಿತೆಯನ್ನು ಬಾನುಲಿ ಸಾರಿದೆ. ಶತಮಾನದ ಗಡಿಯಲ್ಲಿರುವ ಭಾರತೀಯ ಪ್ರಸಾರ ವ್ಯವಸ್ಥೆಯಲ್ಲಿ ಆಕಾಶವಾಣಿ ಎಂಬ ಬೃಹತ್ ಪ್ರಸಾರ ಜಾಲವು ಚರಿತ್ರೆಯೂ ಹೌದು, ವರ್ತಮಾನವೂ ಹೌದು.
- ಬಿ.ಎಸ್. ರಫೀಕ್ ಅಹಮದ್, ಮಡಿಕೇರಿ.