ಮಡಿಕೇರಿ, ಜು. ೧೯ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಕೆಲವು ವರ್ಷಗಳಿಂದ ಮುಚ್ಚಲ್ಪಟ್ಟಿರುವ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೇಂದ್ರದ ಬಗ್ಗೆ ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಸರಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರ ಗಮನ ಸೆಳೆದಿದ್ದಾರೆ.
ಟಿಕೆಟ್ ಬುಕ್ಕಿಂಗ್ ಕೇಂದ್ರ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಇದು ಜನತೆಗೆ ಅನುಕೂಲಕರವಾಗಿತ್ತು. ಅಲ್ಲದೆ ಲಾಭದಾಯಕವಾಗಿಯೂ ಮುಂದುವರಿದಿತ್ತು. ಆದರೆ ಕೋವಿಡ್ ಸಂದರ್ಭದಿAದ ಯಾವುದೇ ಮಾಹಿತಿಯಿಲ್ಲದೆ ಈ ಕೇಂದ್ರವನ್ನು ಮುಚ್ಚಿದ್ದು ನಂತರದಲ್ಲಿ ತೆರೆಯಲೇ ಇಲ್ಲ. ಈ ಕೇಂದ್ರಕ್ಕೆ ನಗರಸಭೆಯೂ ಉಚಿತವಾಗಿ ಮಳಿಗೆಯನ್ನು ನೀಡಿದ್ದರೂ ಅದು ಇನ್ನೂ ಬೀಗ ಜಡಿದ ಸ್ಥಿತಿಯಲ್ಲೇ ಇದೆ. ಈ ಬಗ್ಗೆ ‘ಶಕ್ತಿ’ ಇತ್ತೀಚೆಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿರುವ ಸಂಸದ ಯದುವೀರ್ ಒಡೆಯರ್ ಅವರು ಈ ಬಗ್ಗೆ ಆಸಕ್ತಿ ತೋರಿದ್ದು ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.