ಸಿದ್ದಾಪುರ, ಜು. ೧೯ : ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಚೆನ್ನಂಗಿ, ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕಳೆದೆರಡು ದಿನಗಳಿಂದ ಸತತವಾಗಿ ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಬಾಡಗ ಬಾಣಂಗಾಲ ಹಾಗೂ ಚೆನ್ನಯ್ಯನಕೋಟೆ ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಚರಣೆಯನ್ನು ಹಮ್ಮಿಕೊಳ್ಳಲಾಯಿತು. ಇತ್ತೀಚೆಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಕಾಡಾನೆಗಳ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸಿದವು. ಒಂದು ಗುಂಪಿನ ಕಾಡಾನೆಗಳು ಮಾತ್ರ ಕಾಡಿನತ್ತ ತೆರಳಿದ್ದು, ಮತ್ತೊಂದು ಗುಂಪಿನ ಕಾಡಾನೆಗಳ ಹಿಂಡು ಮಾರಿಯಾನೆಗಳೊಂದಿಗೆ ಇದ್ದ ಕಾರಣ ಕಾಫಿ ತೋಟದಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕಿದ್ದವು. ಈ ಹಿನ್ನೆಲೆ ಶನಿವಾರದಂದು ಬೆಳಿಗ್ಗಿನಿಂದಲೇ ಮಳೆ ಹಾಗೂ ಕೆಸರಿನ ನಡುವೆ ಕಾರ್ಯಾಚರಣೆ ತಂಡವು ಕಾಫಿ ತೋಟದ ಒಳಗೆ ಸುತ್ತಾಡಿತು. ಈ ಸಂದರ್ಭ ದಕ್ಷ ಹಾಗೂ ಉಷಾ ಗುಂಪಿನ ಒಟ್ಟು ೨೭ ಕಾಡಾನೆಗಳು ಕಂಡುಬAದವು. ಈ ಎರಡು ಗುಂಪಿನಲ್ಲಿ ೮ಕ್ಕೂ ಅಧಿಕ ಸಣ್ಣ ಮರಿಗಳು ಹಾಗೂ ಮರಿಯಾನೆಗಳು ಕಂಡುಬAದವು ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿ ತಿಳಿಸಿದರು. ಕಾರ್ಯಾಚರಣೆ ಸಂದರ್ಭ ಎರಡು ದಿನಗಳ ಕಾಲ ಬಾಡಗ ಬಾಣಂಗಾಲ ಹಾಗೂ ಮೇಕೂರು, ಹೊಸ್ಕೇರಿ ಗ್ರಾಮದ ವ್ಯಾಪ್ತಿಯ ಕಾಫಿತೋಟಗಳ ಮಾಲೀಕರು ತಮ್ಮ ಕಾರ್ಮಿಕರಿಗೆ ಕೆಲಸಕ್ಕೆ ರಜೆ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ಸಹಕಾರ ನೀಡಿದ್ದರು. ಆದರೆ ಖಾಸಗಿ ತೋಟವೊಂದರ ಕಾರ್ಮಿಕರಿಗೆ ರಜೆ ನೀಡದೆ ಇದ್ದ ಕಾರಣ ಕಾಡಾನೆಗಳು ಅರಣ್ಯದತ್ತ ತೆರಳುವ ಸಂದರ್ಭ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡುವ ಶಬ್ದದಿಂದಾಗಿ ಕಾಡಾನೆಗಳು ಅರಣ್ಯಕ್ಕೆ ತೆರಳಲು ಹಿಂದೇಟು ಹಾಕಿ ಹಿಂತಿರುಗಿ ಬಂದ ಘಟನೆಯೂ ನಡೆಯಿತು.

ಇದರಿಂದಾಗಿ ಕೆಲಕಾಲ ಸಮಸ್ಯೆ ಎದುರಾಗಿತ್ತು ನಂತರ ಸ್ಥಳೀಯ ಕಾಫಿ ತೋಟದ ಮಾಲೀಕರಾದ ಪೃಥ್ವಿ ಎಂಬವರು ಕೆಲಸ ನಿಲ್ಲಿಸುವಂತೆ ತಿಳಿಸಿದ ಮೇರೆಗೆ ಕೆಲಸವನ್ನು ಸ್ಥಗಿತಗೊಳಿಸಿ ಕಾಡಾನೆಗಳು ಕಾಡಿನತ್ತ ತೆರಳಲು ಅವಕಾಶ ಕಲ್ಪಿಸಲಾಯಿತು. ಕಾರ್ಯಾಚರಣೆ ತಂಡವು ಎಲ್ಲಾ ಕಾಡಾನೆಗಳನ್ನು ಮಾಲ್ದಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು.

ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮತ್ತು ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಅರಣ್ಯ ರಕ್ಷಕ ರಾಜೇಶ್, ವನ್ಯಜೀವಿ ವಲಯದ ಅರಣ್ಯ ರಕ್ಷಕ ಮತ್ತು ಸಿಬ್ಬಂದಿಗಳು ಚೆನ್ನಂಗಿ ಭಾಗದ ಆರ್.ಆರ್.ಟಿ. ತಂಡದ ದೇವ್‌ಮಚ್ಚಿ ಸಿಬ್ಬಂದಿಗಳು ಟಾಟಾ ಕಾಫಿ ಸಂಸ್ಥೆಯ ಎಲಿಫೆಂಟ್ ಟ್ಯಾಕರ್ಸ್ಗಳು, ವಾಹನ ಚಾಲಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ವಾಸು