ವೀರಾಜಪೇಟೆ, ಜು. ೧೮: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅನಾರೋಗ್ಯದಿಂದ ಮೃತಪಟ್ಟ ಘಟನೆ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಮಕ್ಕಿಯಲ್ಲಿ ನಡೆದಿದೆ.
ಹೆಚ್.ಬಿ. ರವಿಶಂಕರ್ (೩೯) ಮೃತಪಟ್ಟ ಯೋಧ. ಕಿರುಮಕ್ಕಿಯ ಹೆಚ್.ಬೀರಯ್ಯ ಎಂಬವರ ಪುತ್ರ ರವಿಶಂಕರ್ ರಜೆ ಮೇಲೆ ತಿಂಗಳ ಹಿಂದೆಯೇ ಊರಿಗೆ ಬಂದಿದ್ದರು. ರವಿಶಂಕರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯೋಧ ರವಿಶಂಕರ್ ಅವರು ೨೦೦೪ ರಲ್ಲಿ ಸೇನೆಗೆ ಸೇರಿದ್ದು ಅಸ್ಸಾಂ ರೈಫಲ್ಸ್ನಲ್ಲಿ ಮಣಿಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ೨೧ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಯೋಧ ಇನ್ನೆರಡು ದಿನದಲ್ಲಿ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.
ಸಾವಿನ ಸುದ್ದಿ ತಿಳಿದ ಕೂಡಲೇ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಮೃತ ಯೋಧನ ಅಂತಿಮ ದರ್ಶನ ಪಡೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಬಳಿಕ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಭಾರತೀಯ ಸೇನೆಯ ಬೆಂಗಳೂರಿನ ಮುಖ್ಯ ಕಚೇರಿಯಿಂದ ಆಗಮಿಸಿದ ಅಧಿಕಾರಿಗಳು ಮೃತ ಯೋಧರ ಅಂತಿಮ ಗೌರವ ಅರ್ಪಿಸಿ ಪಥ ಸಂಚಲನ ನಡೆಸಿದರು. ಈ ವೇಳೆ ಯೋಧನ ಪತ್ನಿ, ಹೆತ್ತವರು ಮತ್ತು ಸಂಬAಧಿಗಳ ರೋಧನ ಮುಗಿಲು ಮುಟ್ಟಿತ್ತು. ಜಿಲ್ಲಾ ಪೊಲೀಸ್ ಡಿಆರ್ ತುಕಡಿ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು. ವೀರಾಜಪೇಟೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಗೌರವ ನಮನ ಸಲ್ಲಿಸಿ ಮೃತ ಯೋಧನ ಪತ್ನಿಗೆ ರಾಷ್ಟçದ್ವಜ ಹಸ್ತಾಂತರಿಸಲಾಯಿತು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ನಿರ್ದೇಶಕರುಗಳಾದ ಚೇಂದ್ರಿಮಾಡ ನಂಜಪ್ಪ, ಕಬ್ಬಚ್ಚಿರ ಬೋಪಣ್ಣ, ಬಾಳೆಕುಟ್ಟಿರ ದಿನಿ ಸೇರಿದಂತೆ ಮಾಜಿ ಸೈನಿಕರುಗಳು, ವೀರಾಜಪೇಟೆ ತಾಲೂಕು ದಂಡಾಧಿಕಾರಿ ಅನಂತ ಶಂಕರ, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು, ನೆರೆಯವರು, ಊರಿನವರು ಸೇರಿದಂತೆ ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದರು.