ಕರಿಕೆ, ಜು. ೧೮: ಕೇರಳ-ಕರ್ನಾಟಕ ಗಡಿ ಭಾಗವಾದ ಕರಿಕೆಯ ತೋಟಂ ಬಳಿಯ ಮಂಜಿನಡ್ಕ ಎಂಬಲ್ಲಿ ಬೈಕ್ ಸಹಿತ ನದಿಯಲ್ಲಿ ಬೆಳಗಾವಿ ಮೂಲದ ಕಾರ್ಮಿಕ ಕೊಚ್ಚಿಹೋದ ಘಟನೆ ನಡೆದಿದೆ.

ಬೆಳಗಾವಿಯ ದುರ್ಗಪ್ಪ ಎಂಬವರು ನದಿಯಲ್ಲಿ ಕೊಚ್ಚಿಹೋಗಿದ್ದು, ಆತನ ಪತ್ತೆಗೆ ತಂಡ ಶ್ರಮಿಸುತ್ತಿದೆ. ಆದರೆ, ಪ್ರತಿಕೂಲ ವಾತಾವರಣದಿಂದ ಸುಳಿವು ಸಿಗುತ್ತಿಲ್ಲ.

ಕೇರಳದ ಪತನಡಿಯ ಗೇರು ಪ್ಲಾಂಟೇಶನ್‌ನಲ್ಲಿ ಕೆಲಸ ಮಾಡುತ್ತಿದ್ದ ದುರ್ಗಪ್ಪ ಮಧ್ಯಾಹ್ನ ಊಟ ತರಲೆಂದು ಕರಿಕೆಯ ತೋಟಂನಲ್ಲಿ ವಾಸವಿದ್ದ ಮನೆಗೆ ತನ್ನ ಬೈಕ್‌ನಲ್ಲಿ ತೆರಳುವ ಸಂದರ್ಭ ವಿಪರೀತ ಮಳೆಯಾಗುತ್ತಿದ್ದ ವೇಳೆ ಮಂಜಿನಡ್ಕ ಬಳಿಯ ಸೇತುವೆ ದಾಟುವಾಗ ಬೈಕ್ ಸಹಿತ ದುರ್ಗಪ್ಪ ಕೊಚ್ಚಿಹೋಗಿದ್ದಾರೆ.

ಕರಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸ್ಥಳೀಯರು, ಕೇರಳ ಪೊಲೀಸರು, ಗೇರು ನಿಗಮದ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದು, ಕೇರಳದ ರಾಜಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಪರೀತ ಮಳೆ ಹಾಗೂ ಕತ್ತಲೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇಂದು ಹುಡುಕಾಟ ಮುಂದುವರೆಸುವುದಾಗಿ ಗ್ರಾಮ ಬಾಲಚಂದ್ರ ನಾಯರ್ ‘ಶಕ್ತಿ’ ಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮಳೆಗಾಲ ಸಂದರ್ಭ ಇದೇ ಜಾಗದಲ್ಲಿ ಯುವಕನೊಬ್ಬ ಬೈಕ್ ದಾಟಿಸಲು ಯತ್ನಿಸಿ ಬೈಕ್ ಕೊಚ್ಚಿ ಹೋಗಿತ್ತು. ಇಂದು ಹುಡುಕಾಟ ನಡೆಸುವ ಸಂದರ್ಭದಲ್ಲಿ ಆ ಬೈಕ್ ಪತ್ತೆಯಾಗಿದೆ.

-ಸುಧೀರ್