ಸಿದ್ದಾಪುರ, ಜು. ೧೮: ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದ್ದು, ಕೂದಲೆಳೆ ಅಂತರದಿAದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಮೂಲದ ಪರಮಾನಂದ (೩೦) ಹಾಗೂ ರಘು (೪೨) ಗಾಯಗೊಂಡ ಕಾರ್ಮಿಕರು.
ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದ ಬಳಿ ಕೆಲಸಕ್ಕೆ ಎಂದು ಬಂದಿದ್ದ ಮೂಲತ: ಬಾಗಲಕೋಟೆ ಮೂಲದ ೧೫ ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕಾಫಿ ತೋಟದೊಳಗೆ ಕಟ್ಟಡ ಕೆಲಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕಾಫಿ ತೋಟದ ಒಳಗಿನಿಂದ ಏಕಾಏಕಿ ಒಂಟಿ ಸಲಗ ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪರಮಾನಂದ ಅವರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಪರಿಣಾಮ ಅವರÀ ತಲೆ ಮತ್ತು ಎದೆಯ ಭಾಗಕ್ಕೆ ಗಾಯವಾಗಿದೆ. ಇದೇ ಸಂದರ್ಭ ಸಹ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಆದರೆ, ಓಡುವ ಸಂದರ್ಭ ರಘು ಅವರು ಆಯಾ ತಪ್ಪಿ ರಸ್ತೆಗೆ ಬಿದ್ದು ಗಂಭೀರಗೊAಡಿದ್ದಾರೆ.
ಕಾಡಾನೆ ದಾಳಿಗೆ ತುತ್ತಾದ ಪರಮಾನಂದ ಅವರು ಕಿರುಚಿಕೊಂಡಾಗ ಸಲಗವು ಸ್ಥಳದಿಂದ ಮತ್ತೊಂದು ತೋಟದತ್ತ ಕಾಲ್ಕಿತ್ತಿದೆ.
ಗಂಭೀರ ಗಾಯಗೊಂಡ ಪರಮಾನಂದ ಹಾಗೂ ರಘು ಅವರನ್ನು ಕೂಡಲೇ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಒಂಟಿ ಸಲಗ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ. ಅಲ್ಲದೆ ಮಾನವನ ಮೇಲೆ ದಾಳಿ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೆ ಉಪಟಳ ನೀಡುತ್ತಿರುವ ಈ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
(ಮೊದಲ ಪುಟದಿಂದ) ಕಳೆದ ಹಲವು ದಿನಗಳಿಂದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್ ನೇತೃತ್ವದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದ್ದರೂ ಕಾಡಾನೆಗಳು ಮರಳಿ ಕಾಫಿ ತೋಟದತ್ತ ಲಗ್ಗೆ ಇಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
-ವರದಿ : ವಾಸು
ಒಂಟಿ ಸಲಗ ಕಾಡಿಗೆ
ಶಾಸಕ ಪೊನ್ನಣ್ಣನವರ ಸೂಚನೆಯ ಮೇರೆಗೆ ಕರಡಿಗೋಡು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದರು.
ಘಟನಾ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಕಾರ್ಯಾಚರಣೆಯನ್ನು ಕೈಗೊಂಡು ಸಲಗವನ್ನು ಕಾಡಿಗೆ ಓಡಿಸಿದರು. ಕಾಡಾನೆಗಳು ಕಾಫಿ ತೋಟಗಳತ್ತ ಸುಳಿಯದಂತೆ ಸಿಬ್ಬಂದಿಗಳನ್ನು ರಾತ್ರಿಗಸ್ತು ತಿರುಗಲು ನೇಮಿಸಲಾಗುವುದೆಂದು ವಲಯ ಅರಣ್ಯ ಅಧಿಕಾರಿ ಶಿವರಾಂ ಮಾಹಿತಿ ನೀಡಿದರು. ಈಗಾಗಲೇ ಕಾರ್ಮಿಕರ ಮೇಲೆ ದಾಳಿ ನಡೆಸಿದ ಸಲಗವನ್ನು ಅರಣ್ಯದತ್ತ ಓಡಿಸಲಾಗಿದ್ದು ಇದರ ಚಲನವಲನ ಕಂಡುಹಿಡಿಯಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.