ಸಿದ್ದಾಪುರ, ಜು. ೧೧: ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ನೊಕ್ಯ, ಭದ್ರಗೊಳ, ಮಾಯಮುಡಿ, ಧನುಗಾಲ, ರುದ್ರಬೀಡು ಗ್ರಾಮಗಳ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸಿ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ ನೇತೃತ್ವದಲ್ಲಿ ಕಳೆದೆರಡು ದಿನಗಳಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಸುಮಾರು ೧೫ಕ್ಕೂ ಅಧಿಕ ಕಾಡಾನೆಗಳನ್ನು ಶಾಸಕ ಪೊನ್ನಣ್ಣ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುವ ಮೂಲಕ ಕಾಡಿಗೆ ಓಡಿಸು ವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾದರು. ಕಾಡಾನೆಗಳ ಗುಂಪುಗಳಾದ ಅನನ್ಯ ಹಾಗೂ ಎನಿ ಫೋರ್ಡ್ ಗುಂಪಿನ ಕಾಡಾನೆಗಳನ್ನು ಶುಕ್ರವಾರದಂದು ಮಾವುಕಲ್ಲು ಅರಣ್ಯ ಹಾಗೂ ನಾಗರಹೊಳೆ ಅರಣ್ಯಕ್ಕೆ ಅಟ್ಟಲಾಯಿತು ಎಂದು ವಲಯ ಅರಣ್ಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಎ.ಸಿ.ಎಫ್. ಗೋಪಾಲ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಆನೆ ಕಾರ್ಯಪಡೆ ಮತ್ತು ಆರ್.ಆರ್.ಟಿ. ತಂಡ, ವನ್ಯಜೀವಿ ಅರಣ್ಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.