ಗೋಣಿಕೊಪ್ಪಲು, ಜು. ೧೦: ಇಲ್ಲಿನ ಸಂತ ಥೋಮಸ್ ಶಾಲೆಯ ಶಾಲಾ ಸಂಸತ್ತು ಪದಗ್ರಹಣ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಟಾಟಾ ಕಾಫಿ ಹಿರಿಯ ಮುಖ್ಯ ವ್ಯವಸ್ಥಾಪಕ ಕಳ್ಳಿಚಂಡ ರಾಜೀವ್, ವಿದ್ಯಾರ್ಥಿಗಳು ಶಾಲಾ ಪಠ್ಯ ವಿಷಯದೊಂದಿಗೆ ವಿವಿಧ ಕೌಶಲ್ಯಗಳ ತರಬೇತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಪ್ರತಿಭೆಗೆ ಹೆಚ್ಚು ಮನ್ನಣೆ ಸಿಗಲಿದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಶಾಲಾ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರುಗಳು ಮತ್ತು ಪೋಷಕರು ಹೆಚ್ಚು ಆಸಕ್ತಿ ವಹಿಸಬೇಕು ಎಂದರು. ಸಂತ ಥೋಮಸ್ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ ಮಾತನಾಡಿದರು.
ಈ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರೇ ಫಾದರ್ ಅಂತೋಣಿ, ಶಾಲೆ ವ್ಯವಸ್ಥಾಪಕ ರೆ. ಫಾದರ್ ಥೋಮಸ್, ಶಾಲೆಯ ಆಡಳಿತಾಧಿಕಾರಿ ರೆ. ಫಾದರ್ ಬಿಪಿನ್ ಹಾಗೂ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.