ಶನಿವಾರಸಂತೆ, ಜು. ೧೦: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ-ಬೀಸುತ್ತಿರುವ ಗಾಳಿಯಿಂದ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮಾತನಾಡಿ, ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯಿಂದ ಪ್ರಾಕೃತಿಕ ವಿಕೋಪ ಸಹಜವಾಗಿ ಸಂಭವಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಅಪಾಯ ಎದುರಿಸಲು ಪೊಲೀಸ್ ಇಲಾಖೆ ಜೊತೆ ಸಹಕರಿಸಲು ಸಾರ್ವಜನಿಕರು, ಎಲ್ಲರು ಸ್ಪಂದಿಸಿ, ಕೈಜೋಡಿಸಬೇಕು ಎಂದು ಕರೆನೀಡಿ, ಉಪಯುಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜುಗಾರರು, ಜೆಸಿಬಿ, ಕ್ರೇನ್, ಆಟೋ ಮಾಲೀಕರು-ಚಾಲಕರು, ಆಪರೇಟರ್‌ಗಳು, ಆ್ಯಂಬುಲೆನ್ಸ್ ಮಾಲೀಕರು-ಚಾಲಕರು ಹಾಗೂ ಲಭ್ಯವಿರುವ ವುಡ್ ಕಟ್ಟರ್‌ಗಳ ಮಾಲೀಕರು ಪಾಲ್ಗೊಂಡಿದ್ದರು.