ಕಡಂಗ, ಜು. ೧೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ನಾಶಪಡಿಸುತ್ತಿವೆ.
ಎಡಪಾಲ ಗ್ರಾಮದ ಕುರಿಕಡೆ ರಝಾಕ್ ಅವರ ತೋಟದಲ್ಲಿ ಬೆಳೆದ ಕಾಫಿ, ತೆಂಗು, ಬಾಳೆ, ಅಡಿಕೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟು ಮಾಡಿದೆ. ಗ್ರಾಮದ ಕುರಿಕಡೆ ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ್ದು, ಇದರಿಂದ ಅಪಾರ ನಷ್ಟ ಸಂಭವಿಸಿದೆ. ಕಾಡಾನೆ ಉಪಟಳದಿಂದ ಗ್ರಾಮದಲ್ಲಿ ಆತಂಕ ಪರಿಸ್ಥಿತಿ ಉದ್ಭವವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿದರು. ನಷ್ಟ ಅನುಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ನೌಫಲ್