ಸೋಮವಾರಪೇಟೆ, ಜು. ೯: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ವಿವೇಕಾನಂದ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು,ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಜೇಸೀ ವೇದಿಕೆಯ ಬಳಿ ಸಮಾವೇಶಗೊಂಡು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಈ ಸಂಬAಧಿತ ಮನವಿಯನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ, ರೈತ, ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಮಸೂದೆಯನ್ನು ರಾಜ್ಯ ಸರಕಾರ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಕೊಡಗು ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಾರ್ಮಿಕರು ಲೈನ್ ಮನೆಗಳಲ್ಲಿ ವಾಸ ಮಾಡುತ್ತಾ ಕೂಲಿ ಮಾಡುತ್ತಿದ್ದಾರೆ. ಅನೇಕ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಒತ್ತುವರಿ ಆಗಿರುವ ಸರಕಾರಿ ಜಾಗವನ್ನು ಮುಟ್ಟುಗೋಲು ಹಾಕಿ, ನಿವೇಶನ ರಹಿತ ಕೂಲಿ ಕಾರ್ಮಿಕರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಕೆ.ಎಂ. ಲಕ್ಷö್ಮಣ್, ಎಐಟಿಯುಸಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಪಿ.ಟಿ. ಸುಂದರ, ಜಿಲ್ಲಾ ಸಲಹೆಗಾರ ಶೇಷಪ್ಪ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆಯ ಅಧ್ಯಕ್ಷ ಎಂ.ಪಿ. ಹೊನ್ನಪ್ಪ ಮತ್ತಿತರರು ಇದ್ದರು.