ಕೂಡಿಗೆ, ಜು. ೯: ಒಂದೊಮ್ಮೆ ಸುಮಾರು ೧೨೦ ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ರೇಷ್ಮೆ ಬೆಳೆಯುತ್ತಿದ್ದ ಪ್ರದೇಶವಿಂದು ಹರಿದು ಹಂಚಿ ಹೋಗಿ ಅಳಿದುಳಿದ ಪ್ರದೇಶ ಕೂಡ ಇದೀಗ ಕಾಡು ಪಾಲಾಗಿದೆ. ರಾಜ್ಯದಲ್ಲೇ ಹೆಸರು ಮಾಡಿದ್ದ ಇಲ್ಲಿನ ರೇಷ್ಮೆ ಮೊಟ್ಟೆ ಹಾಗೂ ಗೂಡು ತಯಾರಿಕಾ ಕೇಂದ್ರಗಳು, ನಿರ್ವಹಣಾ ಕಚೇರಿಗಳು ನೆಲಕಚ್ಚಿವೆ. ಉಸ್ತುವಾರಿಯಲ್ಲಿದ್ದ ಅಧಿಕಾರಿಗಳೆಲ್ಲ ನಿವೃತ್ತಿ ಹೊಂದಿ ಮನೆ ಸೇರಿದ್ದರೆ ಇತ್ತ ಅಳಿವಿನಂಚಿನಲ್ಲಿರುವ ಇಲಾಖೆಗೆ ಇರುವ ಒಬ್ಬ ಜೀಪು ಚಾಲಕನೇ ಉಸ್ತುವಾರಿಯಾಗಿದ್ದಾನೆ., ಕೊನೆಗೂ ಪಾಳುಬಿದ್ದ ರೇಷ್ಮೆ ಕೃಷಿ ಕ್ಷೇತ್ರ ಮುಚ್ಚುವ ಹಂತಕ್ಕೆ ತಲುಪಿದೆ..!

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ರೇಷ್ಮೆ ಬೆಳೆಗೆ ಉತ್ತೇಜನ ನೀಡುವ ಸಲುವಾಗಿ ರೇಷ್ಮೆ ಇಲಾಖೆ ಮೂಲಕ ರೇಷ್ಮೆ ಕೃಷಿ ಕ್ಷೇತ್ರ ನಿರ್ಮಾಣ ಮಾಡಿ ಕಚೇರಿಗಳನ್ನು, ರೇಷ್ಮೆ ಗೂಡು ತಯಾರಿಕಾ ಕೇಂದ್ರ ಹಾಗೂ ಕೃಷಿಕರಿಗೆ ತರಬೇತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ, ಬರ ಬರುತ್ತಾ ಅನುದಾನದ ಅಲಭ್ಯತೆ, ಸರಕಾರ ಹಾಗೂ ಆಡಳಿತದ ನಿರ್ಲಕ್ಷö್ಯದಿಂದಾಗಿ ಕ್ಷೇತ್ರ ಕಾಡುಪಾಲಾಗುತ್ತಾ ಬರುತ್ತಿರುವಂತೆಯೇ ಇಲ್ಲಿನ ಜಾಗಗಳನ್ನು ಇತರ ಇಲಾಖಾ ಕಚೇರಿಗಳಿಗೆ ಕಟ್ಟಡ ಇನ್ನಿತರ ಕಾರ್ಯಗಳಿಗಾಗಿ ಹಂಚಿಕೆ ಮಾಡುತ್ತಾ ಬರಲಾಯಿತು. ಇತ್ತ ಕಚೇರಿಗಳೂ ಕಾಡುಪಾಲಾಗಿದ್ದು, ಸದ್ಯಕ್ಕೆ ನಿರ್ವಹಣೆ ಇಲ್ಲದೆ ಮುಚ್ಚುವ ಹಂತಕ್ಕೆ ತಲಪಿದೆ.

೨೦ ವರ್ಷಗಳಿಂದ ಅಧಿಕಾರಿಗಳಿಲ್ಲ..!

ಎಲ್ಲ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ರೇಷ್ಮೆ ಇಲಾಖೆ ಕಾರ್ಯವೈಖರಿ ಆರಂಭಿಸಲಾಯಿತು. ಆದರೆ ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ಹಿನ್ನೆಲೆಯಲ್ಲಿ ಜಿಲ್ಲೆಯ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ರೇಷ್ಮೆ ಬೆಳೆಯಲಾಗುತ್ತಿದೆ. ಹಾಗಾಗಿ ಕೂಡಿಗೆ ಕೃಷಿ ಕ್ಷೇತ್ರ ಆವರಣದಲ್ಲಿ ರೇಷ್ಮೆ ಕೃಷಿ ಕ್ಷೇತ್ರ ಹಾಗೂ ಕಚೇರಿಗಳನ್ನು ನಿರ್ಮಾಣ ಮಾಡಲಾಯಿತು. ಸಹಾಯಕ ನಿರ್ದೇಶಕರು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಯಿತು. ನಂತರದಲ್ಲಿ ನಿರ್ವಹಣೆಯಲ್ಲಿ ಕುಂಠಿತ ಕಾಣುತ್ತಿದ್ದಂತೆ ನಿವೃತ್ತಿ ಹೊಂದಿದ ಅಧಿಕಾರಿಗಳ ಸ್ಥಾನಕ್ಕೆ ಮರು ನೇಮಕಾತಿ ಆಗಲಿಲ್ಲ. ಕಳೆದ ೧೫ ವರ್ಷಗಳಿಂದ ಯಾವದೇ ನೇಮಕಾತಿ ಆಗಿಲ್ಲ.

ಜೀಪ್ ಚಾಲಕ ಉಸ್ತುವಾರಿ..!

ಕಳೆದ ೧೦ ವರ್ಷಗಳಿಂದ ಇಲಾಖೆ ನೌಕರರು ಒಬ್ಬೊಬ್ಬರಾಗಿ ವಯೋಮಿತಿ ಆಧಾರದಲ್ಲಿ ನಿವೃತ್ತಿ ಹೊಂದುತ್ತಾ ಬಂದ ಹಿನ್ನೆಲೆಯಲ್ಲಿ ಇದೀಗ ಇಲಾಖೆಯಲ್ಲಿ ಇರುವದು ಒಬ್ಬ ಜೀಪ್ ಚಾಲಕ ಮಾತ್ರ. ೨೬ ಮಂದಿ ಸಿಬ್ಬಂದಿಗಳು ಇರಬೇಕಾದ ಕ್ಷೇತ್ರದಲ್ಲಿ ಚಾಲಕ ಮಾತ್ರ ಇದ್ದು, ಆತನೇ ಸಂಪೂರ್ಣ ಕೂಡಿಗೆ ರೇಷ್ಮೆ ಕೃಷಿ ಕ್ಷೇತ್ರದ ಉಸ್ತುವಾರಿಯಾಗಿದ್ದಾನೆ.

(ಮೊದಲ ಪುಟದಿಂದ) ಅಳಿದುಳಿದಿರುವ ಕಚೇರಿಯ ಬೀಗ ತೆರೆಯುವದು, ಹಾಕುವದು ಮಾತ್ರ ಆತನ ಕಾಯಕವಾಗಿದೆ..!

ಹೆಸರಿಗೊಂದು ಕಚೇರಿ..!

ರೇಷ್ಮೆ ಇಲಾಖೆಯ ನಿರ್ವಹಣೆಗೆ ಮಡಿಕೇರಿಯ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಸಹಾಯಕ ನಿರ್ದೇಶಕರ ಕಚೇರಿಯೊಂದಿದೆ. ಆದರೆ ಇದುವರೆಗೆ ಅಲ್ಲಿ ಯಾವದೇ ಅಧಿಕಾರಿ ಕುಳಿತು ಕೆಲಸ ಮಾಡುವ ಭಾಗ್ಯ ಲಭಿಸಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಪಿರಿಯಾಪಟ್ಟಣ ತಾಲೂಕಿನ ಅಧೀಕ್ಷಕರೋರ್ವರು ಜಿಲ್ಲೆಯ ರೇಷ್ಮೆ ಇಲಾಖೆಯ ಉಸ್ತುವಾರಿ ಆಗಿದ್ದರು. ಆದರೆ ಅವರು ಕೂಡ ನಿವೃತ್ತಿ ಹೊಂದಿದ್ದು ಕೆಲವು ತಿಂಗಳು ಕಚೇರಿ ತೆರೆಯದೆ ಬೀಗ ಜಡಿಯಲ್ಪಟ್ಟಿತ್ತು. ಇದೀಗ ಕಚೇರಿಯಲ್ಲೊಬ್ಬರು ತಾತ್ಕಾಲಿಕ ಸಿಬ್ಬಂದಿಯಿದ್ದು ಬೀಗ ತೆರೆಯುವ, ಹಾಕುವ ಕೆಲಸ ಮಾತ್ರ ಆಗುತ್ತಿದೆ..!

ಗೂಡಿಗೆ ಬೇಡಿಕೆ ಇತ್ತು..!

ಒಂದೊಮ್ಮೆ ರಾಜ್ಯದಲ್ಲೇ ಕೂಡಿಗೆಯ ರೇಷ್ಮೆಗೂಡು ಮತ್ತು ಅದರ ಮೊಟ್ಟೆಗೆ ಭಾರೀ ಬೇಡಿಕೆ ಇತ್ತು. ಕೂಡಿಗೆ ಅರೆ ಮಲೆನಾಡು ಪ್ರದೇಶದ ಹಿನ್ನೆಲೆಯಲ್ಲಿ ಈ ಕೇಂದ್ರದ ರೇಷ್ಮೆ ಮೊಟ್ಟೆಗಳಿಗೆ ರಾಜ್ಯದ ರೈತರುಗಳಿಂದ ಹೆಚ್ಚು ಬೇಡಿಕೆ ಬರುತ್ತಿತ್ತು. ಹಾಗಾಗಿ ಗುಣಮಟ್ಟದ ಗೂಡು ಇಲ್ಲಿ ತಯಾರಾಗುತ್ತಿತ್ತು. ರೈತರು ಕೂಡ ರೇಷ್ಮೆ ಬೆಳೆದು ಇಲಾಖೆಗೆ ನೀಡಿ ತಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊAಡಿದ್ದರು. ಸ್ಥಳೀಯ ಒಂದಿಷ್ಟು ಗ್ರಾಮಸ್ಥರಿಗೆ ಈ ಕೇಂದ್ರದಲ್ಲಿ ಉದ್ಯೋಗ ಕೂಡ ಲಭ್ಯವಾಗಿತ್ತು. ಇದೀಗ ಬೇಡಿಕೆ ಇದ್ದ ಕಾಲ ಹೋಗಿ ಇಲಾಖೆಯ ಕ್ಷೇತ್ರ, ಜಮೀನು, ಕಟ್ಟಡಗಳು ಮತ್ತು ಅಧಿಕಾರಿ ಇದ್ದ ಕಚೇರಿಯು ಸಹ ಕಾಡು ಪಾಲಾಗಿದೆ.

ಕೃಷಿ ಬಿಡದ ರೈತರು..!

ಕೂಡಿಗೆಯಲ್ಲಿ ರೇಷ್ಮೆ ಗೂಡು ತಯಾರಿಕಾ ಕೇಂದ್ರ ಮಾತ್ರವಲ್ಲದೆ ರೈತರಿಗೆ ತರಬೇತಿ ನೀಡುವ ತರಬೇತಿ ಕೇಂದ್ರವೂ ಕಾರ್ಯಾಚರಿಸುತ್ತಿತ್ತು. ೧೫ ವರ್ಷಗಳ ಹಿಂದೆ ಸಾವಿರಾರು ಮಂದಿ ರೈತರು ಇಲ್ಲಿ ತರಬೇತಿ ಪಡೆದು ತಮ್ಮನ್ನು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈಗಲೂ ಕೆಲವು ಮಂದಿ ಕೃಷಿಯನ್ನು ಕೈಬಿಡದೆ ಮುಂದುವರಿಸಿಕೊAಡು ಹೋಗುತ್ತಿರುವವರೂ ಇದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಾತ್ರ ೩೨ ಮಂದಿ ರೇಷ್ಮೆ ಬೆಳೆಗಾರರು ತಮ್ಮ ಜಮೀನಿನಲ್ಲಿ ಹಿಪ್ಪುನೇರಳೆ ಗಿಡಗಳನ್ನು ನೆಟ್ಟು ರೇಷ್ಮೆ ಮೊಟ್ಟೆಗಳನ್ನು ಬೇರೆ ಜಿಲ್ಲೆಯಿಂದ ತಂದು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಇದೀಗ ರೇಷ್ಮೆ ಗೂಡಿಗೆ ಉತ್ತಮವಾದ ಬೆಲೆ ದೊರಕುತ್ತಿದೆಯಾದರೂ ರೈತರಿಗೆ ಸಮರ್ಪಕವಾದ ಮಾಹಿತಿ ನೀಡುವ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ರೈತರು ಬೆಳೆದ ರೇಷ್ಮೆಗೂಡನ್ನು ಬೆಂಗಳೂರು ಅಥವಾ ರಾಮನಗರ ರೇಷ್ಮೆ ಮಾರುಕಟ್ಟೆಗೆ ಮಾರಾಟ ಮಾಡಲು ತಾಲೂಕಿನ ರೈತರು, ರೇಷ್ಮೆ ಬೆಳೆಗಾರ ಎಂಬ ದೃಢೀಕರಣ ಪತ್ರಕ್ಕೂ ಸಹ ಬೇರೆ ಜಿಲ್ಲೆಯ ಅಧಿಕಾರಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿದ್ದರೂ ಸಮರ್ಪಕವಾಗಿ ರೇಷ್ಮೆ ತರಬೇತಿಗೆ ಉತ್ತೇಜನ ನೀಡುವ ಅಧಿಕಾರಿಗಳೇ ಇಲ್ಲದಾಗಿ ಯುವಕರು ಬೇರೆ ಕೃಷಿಯತ್ತ ಗಮನ ಹರಿಸಬೇಕಾದ ಪ್ರಸಂಗ ಎದುರಾಗುತ್ತಿದೆ.

ಮುಚ್ಚುವ ಹಂತ..!

ಕೂಡಿಗೆಯಲ್ಲಿದ್ದ ರೇಷ್ಮೆ ಇಲಾಖೆಯ ೧೨೦ ಎಕರೆಗಳಷ್ಟು ಪ್ರದೇಶ ವಿವಿಧ ಇಲಾಖೆಗೆ ಹರಿದು ಹಂಚಿ ಹೋಗಿ ಇದೀಗ ಕೇವಲ ೧೦ ಎಕರೆಗಳಷ್ಟು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಸುಮಾರು ಒಂದು ಕೋಟಿ ವೆಚ್ಚದ ನೌಕರರ ಕೊಠಡಿ ಸೇರಿದಂತೆ ನಾಲ್ಕು ಕಟ್ಟಡಗಳು, ರೇಷ್ಮೆ ಗೂಡು ಬಿತ್ತನೆ ಕೋಟೆ ಸೇರಿದಂತೆ ಎಲ್ಲಾ ಕಟ್ಟಡಗಳು ಇದ್ದು, ಪಾಳುಬಿದ್ದಿವೆ. ಸರಕಾರದ ನಿರ್ಲಕ್ಷö್ಯ ದಿಂದಾಗಿ ಸಂಪೂರ್ಣವಾಗಿ ಮುಚ್ಚುವ ಹಂತಕ್ಕೆ ತಲುಪಿದೆ..!

- ಕೆ.ಕೆ. ನಾಗರಾಜಶೆಟ್ಟಿ.