ಮಡಿಕೇರಿ, ಜು. ೯: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೋಶಾಲೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಶಾಲೆಯಲ್ಲಿರುವ ವ್ಯವಸ್ಥೆಗಳ ಕುರಿತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮಂತರ್ ಗೌಡ ಅವರು ಬಳಿಕ ಪಶುಸಂಗೋಪನಾ ಸಚಿವ ವೆಂಕಟೇಶ್ ಅವರಿಗೆ ದೂರವಾಣಿ ಕರೆ ಮಾಡಿ ಗೋಶಾಲೆಯ ೮ ಎಕರೆ ಜಾಗ ಪೈಕಿ ಚೈನ್‌ಲಿಂಕ್ ಮೆಷ್ ಅಳವಡಿಕೆಗೆ ಬಾಕಿ ಇರುವ ೬ ಎಕರೆ ಜಾಗಕ್ಕೆ ಮೆಷ್ ಅಳವಡಿಸುವಂತೆ ಹಾಗೂ ಹೆಚ್ಚುವರಿ ಶೆಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಮಂತರ್ ತಿಳಿಸಿದ್ದಾರೆ.
ಭೇಟಿ ವೇಳೆ ತಹಶೀಲ್ದಾರ್ ಪ್ರವೀಣ್, ಪಶುಸಂಗೋಪನಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ. ಪ್ರಸನ್ನ, ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೋಹನ್ ದಾಸ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಸೇರಿದಂತೆ ಇನ್ನಿತರರು ಹಾಜರಿದ್ದರು.