ಸೋಮವಾರಪೇಟೆ, ಜು. ೮ : ಭಾರೀ ಗಾಳಿ ಮಳೆಗೆ ತಾಲೂಕಿನ ಗರ್ವಾಲೆ ಅಂಗನವಾಡಿ ಕೇಂದ್ರದ ಮೇಲೆ ಇಂದು ಬೆಳಿಗ್ಗೆ ಬೃಹತ್ ಗಾತ್ರದ ಎರಡು ಮರಗಳು ಉರುಳಿ ಬಿದ್ದು ಅಂಗನವಾಡಿಯ ಮೇಲ್ಚಾವಣಿ ಸಂಪೂರ್ಣ ಜಖಂಗೊAಡಿದ್ದು, ಭಾರೀ ದುರಂತ ತಪ್ಪಿದೆ.

ಗರ್ವಾಲೆ ಅಂಗನವಾಡಿ ಕಟ್ಟಡದ ಬಳಿಯಿದ್ದ ಹಲಸು ಹಾಗೂ ನೇರಳೆ ಮರಗಳು ಭಾರೀ ಗಾಳಿ ಮಳೆಗೆ ಇಂದು ಬೆಳಿಗ್ಗೆ ೯. ೧೫ರ ಸುಮಾರಿಗೆ ಅಂಗನವಾಡಿ ಕೇಂದ್ರದ ಮೇಲೆ ಬಿದ್ದಿದೆ. ಪರಿಣಾಮ ಕೇಂದ್ರದ ಮೇಲ್ಚಾವಣಿಗೆ ಅಳವಡಿಸಿದ್ದ ಹೆಂಚುಗಳು ಜಖಂಗೊAಡಿದ್ದರೆ, ಸಹಾಯಕಿಯ ತಲೆಭಾಗಕ್ಕೆ ಗಾಯಗಳಾಗಿವೆ.

ಈ ಅಂಗನವಾಡಿಯಲ್ಲಿ ೧೩ ಮಕ್ಕಳು ಕಲಿಕಾರಂಭ ಮಾಡುತ್ತಿದ್ದು, ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇಂದು ಬೆಳಿಗ್ಗೆ ಎಂದಿನAತೆ ಅಂಗನವಾಡಿ ಶಿಕ್ಷಕಿ ಕಾವ್ಯಾ ಹಾಗೂ ಸಹಾಯಕಿ ಬೇಬಿ ಅವರುಗಳು ಕೇಂದ್ರಕ್ಕೆ ಆಗಮಿಸಿ,

(ಮೊದಲ ಪುಟದಿಂದ) ಬೀಗ ತೆಗೆದು ಶುಚಿಗೊಳಿಸಿ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಅದೃಷ್ಟವಶಾತ್ ಮಕ್ಕಳಿಗೆ ಗ್ರಾಮ ಪಂಚಾಯಿತಿ ಕಚೇರಿ ಸಂಕೀರ್ಣದಲ್ಲಿ ಗ್ರಾಮ ಆರೋಗ್ಯ ಸಹಾಯಕಿಯರು ವಿಟಮಿನ್ ಮಾತ್ರೆಗಳನ್ನು ನೀಡುತ್ತಿದ್ದರು. ಮಾತ್ರೆ ಸ್ವೀಕರಿಸಿದ ನಂತರ ಮಕ್ಕಳು ಅಂಗನವಾಡಿಗೆ ತೆರಳುವವರಿದ್ದರು. ಈ ನಡುವೆ ಅಂಗನವಾಡಿ ಕಟ್ಟಡದ ಮೇಲೆ ದಿಢೀರಾಗಿ ಮರ ಬಿದ್ದಿದ್ದು, ಘಟನೆಯಿಂದ ಅಂಗನವಾಡಿ ಸಹಾಯಕಿ ಬೇಬಿ ಅವರ ತಲೆ, ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ತಕ್ಷಣ ಮಾದಾಪುರ ಸಮುದಾಯ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ಒಂದು ವೇಳೆ ಅಂಗನವಾಡಿಗೆ ಮಕ್ಕಳು ಆಗಮಿಸಿದ ಸಂದರ್ಭ ಮರ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯಿಸಿ ದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಪ್ರಹ್ಲಾದ್, ಗ್ರಾಮ ಆಡಳಿತಾಧಿಕಾರಿ ಚೈತ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ, ಅರಣ್ಯ ಇಲಾಖೆಯ ಫಾರೆಸ್ಟರ್ ಉಲ್ಲಾಸ್, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯ ಮಾಡಲಾಗಿದೆ.