ಮಡಿಕೇರಿ, ಜು. ೬: ೨೬ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ೧೯೯೯ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಈ ಮಣ್ಣಿನ ವೀರ ಪುತ್ರರು ಮಾಡಿದ ಅತ್ಯುನ್ನತ ತ್ಯಾಗಗಳನ್ನು ಗೌರವಿಸಲು ಮತ್ತು ಸ್ಮರಿಸಲು ಭಾರತೀಯ ಸೇನೆಯು ಘರ್ ಘರ್ ಶೌರ್ಯ ಸನ್ಮಾನ್ ಹೆಸರಿನಲ್ಲಿ ಹುತಾತ್ಮ ಯೋಧರ ಕುಟುಂಬವನ್ನು ಗೌರವಿಸಿ ನಿಮ್ಮೊಂದಿಗೆ ಭಾರತೀಯ ಸೇನೆ ಸದಾ ಇರುತ್ತದೆ ಎಂಬ ಸಂದೇಶ ಸಾರುವ ಮೂಲಕ ಸೇನೆ ವತಿಯಿಂದ ಸ್ಮರಣಿಕೆ ಮತ್ತು ಕೃತಜ್ಞತಾ ಪತ್ರವನ್ನು ಪ್ರದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ನಡೆಯಿತು.
ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಮತ್ತು ಮೂವರು ಇತರ ಶ್ರೇಣಿಗಳ (ಒಆರ್) ಅಧಿಕಾರಿಗಳನ್ನು ಒಳಗೊಂಡ ಆರು ಮಂದಿಯ ಸೇನಾ ನಿಯೋಗದ ತಂಡ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಪೆಮ್ಮಂಡ ಕಾವೇರಪ್ಪ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಸೇನಾ ಗೌರವ ಸೂಚಿಸಿತು.
ಜೂನಿಯರ್ ಕಮಿಷನ್ಡ್ ಆಫೀಸರ್ ನಾಯಕ್/ಸುಬೇದಾರ್, ಕಿಂಗಸ್ಲೀನ್ ಮಾತನಾಡಿ, ಭಾರತೀಯ ಸೇನೆಯಿಂದ ಘರ್ ಘರ್ ಶೌರ್ಯ ಸನ್ಮಾನ್ ವಿಶೇಷ ಸಂಪರ್ಕ ಕಾರ್ಯಕ್ರಮವನ್ನು ನಡೆಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವಿವಿಧ ರಾಜ್ಯಗಳ ಹುತಾತ್ಮ ಯೋಧರ ಗ್ರಾಮಗಳಿಗೆ ತೆರಳಿ ಗೌರವ ಸೂಚಿಸಲಾಗುತ್ತಿದೆ.
ಇದು ಹುತಾತ್ಮರನ್ನು ಗೌರವಿಸುವ ಮತ್ತು ಅವರ ಕುಟುಂಬದೊAದಿಗೆ ನಿಲ್ಲುವ ನಮ್ಮ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಸೇನಾ ತಂಡದೊAದಿಗೆ ಆಗಮಿಸಿದ ಕೊಡಗಿನ ನಂಜರಾಯಪಟ್ಟಣದ ನಾಯಕ್ ಸುಬೇದಾರ್ ಸಿ.ಎಲ್. ತಿಲಕ್ ಮಾತನಾಡಿ, ಕೊಡಗಿನ ವೀರ ಪುತ್ರ ಕಾವೇರಪ್ಪ ಹುತಾತ್ಮರಾಗಿ ೨೬ ವರ್ಷ ಕಳೆದಿದೆ. ಹುತಾತ್ಮ ಯೋಧರನ್ನು ಗೌರವಿಸುವ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ಭಾರತೀಯ ಸೇನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರಲ್ಲದೆ ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡಬೇಕೆಂದು ಹೇಳಿದರು.
ಹುತಾತ್ಮ ಯೋಧ ಕಾವೇರಪ್ಪ ಅವರ ಪತ್ನಿ ಶೋಭಾ ಮಾತನಾಡಿ, ಭಾರತೀಯ ಸೇನೆ ಹುತಾತ್ಮರನ್ನು ಗೌರವಿಸುವ ಮೂಲಕ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹೋದರ ಅರುಣ್ ಮಾತನಾಡಿ, ನಮ್ಮ ಕುಟುಂಬದ ಹಲವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಅಣ್ಣ ಕಾವೇರಪ್ಪ ದೇಶಕ್ಕಾಗಿ ವೀರಮರಣ ಹೊಂದಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ಸೇನಾ ತಂಡವÀನ್ನು ಹೂಗುಚ್ಚ ನೀಡುವ ಮೂಲಕ ಬರಮಾಡಿಕೊಂಡು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಅರುಣ್, ಅಪ್ಪಯ್ಯ, ಸಿಂದು, ಪೊನ್ನಪ್ಪ, ನಾಣಯ್ಯ, ಲೋಕೇಶ್, ಸುರೇಶ್, ಜೋಯಪ್ಪ, ಈರಪ್ಪ, ಸುಬಯ್ಯ, ಸೇನಾ ಸಿಬ್ಬಂದಿಗಳಾದ ಹವಾಲ್ದಾರ್ ರೀಜೀಶ, ಲಕ್ಷö್ಮಣ, ರಮೇಶ್ ರೆಡ್ಡಿ, ಸೈಯಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.
-ಎಸ್.ಎಂ. ಮುಬಾರಕ್