ಈ ಭೂಮಿಯಲ್ಲಿ ಜೀವಿಸಲು ಮನುಷ್ಯರಿಗೆ ಇರುವಷ್ಟೇ ಹಕ್ಕು ಅನ್ಯ ಜೀವಿಗಳಿಗೂ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವು ಪ್ರಾಣಿಪಕ್ಷಿಗಳು ಹಾಗೂ ಕ್ರಿಮಿಕೀಟಗಳು ಹಲವು ಬಗೆಯ ಪಿಡುಗನ್ನುಂಟುಮಾಡಿ ಮನುಕುಲಕ್ಕೆ ಆತಂಕ ಸೃಷ್ಟಿಸುವುದರ ಜೊತೆಗೆ ಅವನ ಅಕಾಲಿಕ ಮರಣಕ್ಕೂ ಕಾರಣವಾಗಬಲ್ಲವು. ಅನ್ಯ ಜೀವಿಗಳಿಂದ ಹರಡುವ ಇಂತಹ ವ್ಯಾಧಿಯನ್ನು ಝೋನೋಸಿಸ್ ವ್ಯಾಧಿ ಎಂದು ಕರೆಯಲಾಗುತ್ತದೆ. ಈ ವ್ಯಾಧಿಯು ಮನುಷ್ಯರನ್ನು ಸಾಮೂಹಿಕವಾಗಿಯೂ ಪ್ರತ್ಯೇಕವಾಗಿಯೂ ಕಾಡಬಹುದು. ಹಲವಾರು ವ್ಯಾಧಿಗಳು ನೀರು, ಆಹಾರ, ನಮ್ಮ ಸುತ್ತಮುತ್ತಲಿನ ಪರಿಸರ, ಗಾಳಿ ಮೊದಲಾದವು ಗಳಲ್ಲಿರುವ ಸೂಕ್ಷö್ಮ ಜೀವಿಗಳಿಂದ ಹರಡಬಹುದು. ಸಾಕುಪ್ರಾಣಿಗಳು, ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಪ್ರಾಣಿಗಳಲ್ಲಿ ಇರುವ ವೈರಸ್‌ಗಳು, ಕೀಟಾಣುಗಳೂ ಹೀಗೆ ಹಲವು ಅನ್ಯಜೀವಿಗಳಿಂದ ಮನುಷ್ಯರಿಗೆ ಬೇನೆಯು ತಗುಲಿ ಆತನನ್ನು ಹಿಂಡಿ ಹಿಪ್ಪೆಯನ್ನಾಗಿಸಬಹುದು. ನಾವು ಅತ್ಯಂತ ಪ್ರೀತಿಯಿಂದ ಸಾಕುವ ನಾಯಿಗಳು, ಪಶುಸಂಕುಲಗಳಿAದಲೂ ಈ ಝೋನೋಸಿಸ್ ಎನ್ನುವ ವ್ಯಾಧಿಯು ಹರಡಬಹುದು. ಈ ಹಿಂದೆ ಈ ವ್ಯಾಧಿಗೆ ಚಿಕಿತ್ಸೆಯೇ ಇರಲಿಲ್ಲ. ಆದರೆ ೧೮೮೫ ರಂದು ಲೂಯಿ ಪಾಸ್ಚರ್ ಎನ್ನುವ ವೈದ್ಯ ರೇಬಿಸ್ ರೋಗಕ್ಕೆ ಲಸಿಕೆ ಕಂಡು ಹಿಡಿದು ಅದನ್ನು ಮನುಷ್ಯರಿಗೆ ಬಳಸಿದಾಗ ಅದು ಅಪರಿಮಿತ ಪರಿಣಾಮ ತೋರಿತು. ಈ ಹಿನ್ನೆಲೆಯಲ್ಲಿ ಮನುಕುಲಕ್ಕೆ ಸಂಜೀವಿನಿಯನ್ನಾಗಿಸಿದ ಲೂಯಿ ಪಾಶ್ಚರ್‌ನ ಈ ಸಾಧನೆಯನ್ನು ಗೌರವಿಸಲು ಪ್ರತಿವರ್ಷವೂ ಜುಲೈ ತಿಂಗಳ ಆರರಂದು ವಿಶ್ವ ಝೊನೋಸಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಪ್ರಾಣಿಗಳಿಂದ ಮನುಕುಲಕ್ಕೆ ಹರಡುವ ಕಾಯಿಲೆಗಳ ಅಪಾಯದ ಕುರಿತು ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ. ಪ್ರತಿ ವರ್ಷ ಹೊಸತೊಂದು ಉದ್ಘೋಷ ಇರಿಸಿಕೊಂಡು ಈ ದಿನದ ಮಹತ್ವ ಹೆಚ್ಚಿಸಲಾಗುತ್ತದೆ. “ಝೊನೋಟಿಕ್ ಕಾಯಿಲೆಯ ಸರಪಳಿಯನ್ನು ಮುರಿಯೋಣ” ಎನ್ನುವ ಉದ್ಘೋಷ ಇರಿಸಿಕೊಂಡು ೨೦೨೧ರಲ್ಲಿ ಝೋನೋಟಿಕ್ ದಿನವನ್ನು ಆಚರಿಸಲಾಯಿತು. “ಅಪಾಯವನ್ನು ಅರಿಯಿರಿ, ಪ್ರಕ್ರಿಯೆಯಲ್ಲಿ ತೊಡಗಿರಿ” ಎನ್ನುವುದೂ ಈ ಹಿಂದಿನ ಉದ್ಘೋಷವಾಗಿತ್ತು.

ಈ ಸಮಯದವರೆಗೂ ಸುಮಾರು ೧೫೦ಕ್ಕೂ ಹೆಚ್ಚು ಝೊನೋಟಿಕ್ ಕಾಯಿಲೆಗಳನ್ನು ಗುರುತಿಸಲಾಗಿದೆ. ಪ್ರಾಣಿಗಳೊಂದಿಗೆ ಸಂಪರ್ಕವನ್ನು ನೇರವಾಗಿ ಮಾಡುವ ಅಥವಾ ಪರೋಕ್ಷವಾಗಿ ಮಾಡುವ ಕಾರಣದಿಂದ ಈ ವ್ಯಾಧಿ ಪ್ರಸರಣಗೊಳ್ಳುತ್ತದೆ. ಸೋಂಕಿತ ಕುರಿ, ಕೋಳಿ, ಇಲಿ, ಪಶು ಸಮೂಹಗಳು, ಕೀಟಗಳು, ಕಾಡು ಪ್ರಾಣಿಗಳನ್ನು ಬಾಧಿಸುವ ಜೀವಿಗಳಿಂದಲೂ ಈ ಬೇನೆ ಹರಡುವುದು. ಸೊಳ್ಳೆಗಳು, ಪ್ರಾಣಿಗಳ ಮೈಯಲ್ಲಿ ಇರುವ ಚಿಗಟಗಳೂ ಝೊನೋಟಿಕ್ ವ್ಯಾಧಿಗೆ ಕಾರಣ ವಾಗುತ್ತವೆ. ಜ್ವರ, ಕೆಮ್ಮು, ನೆಗಡಿ, ವಿಪರೀತ ಮೈಕೈ ನೋವು, ಗಂಟಲಿನಲ್ಲಿ ಉರಿ ಮತ್ತು ಊತ ಕಾಣಿಸಿಕೊಳ್ಳುವುದು, ಅತಿಭೇದಿ ಇವೆಲ್ಲವೂ ಈ ಝೊನೋಟಿಕ್ ವ್ಯಾಧಿಯ ಕೆಲವು ಕುರುಹುಗಳಾಗಿವೆ.

ಝೊನೋಟಿಕ್ ಕಾಯಿಲೆ ಗಳಲ್ಲಿ ಹಲವು ವಿಧಗಳಿದ್ದು ಕೆಲವು ರೋಗಗಳಿಗೆ ಇನ್ನೂ ಚಿಕಿತ್ಸೆಯನ್ನು ಕಂಡುಹಿಡಿಯ ಲಾಗಿಲ್ಲ. ಮಂಗನ ಕಾಯಿಲೆ, ಕೊರೊನಾ, ಕೋಳಿ ಜ್ವರಗಳು, ಡೆಂಗು ಮೊದಲಾದ ಕಾಯಿಲೆಗಳು ಇನ್ನೂ ಔಷಧಿಗಳ ಹಿಡಿತಕ್ಕೆ ಸಿಲುಕದೆ ನುಣುಚಿಕೊಳ್ಳುತ್ತಿವೆ. ಕೊರೊನಾ ವ್ಯಾಧಿ ಮಾರಕವಾಗಿ ವಿಶ್ವದ ಎಲ್ಲೆಡೆಯೂ ಹಬ್ಬ ತೊಡಗಿದಾಗ ವಿಜ್ಞಾನಿಗಳ ಅವಿರತ ಪರಿಶ್ರಮದಿಂದ ಅದಕ್ಕೆ ಲಸಿಕೆ ಕಂಡುಹಿಡಿಯ ಲಾಯಿತಾದರೂ ಅದರಿಂದ ಆಗಬಹುದಾದ ಅಡ್ಡಪರಿಣಾಮ ಗಳನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಕೆಲವು ಆಘಾತಕಾರಿ ಕಾಯಿಲೆಗಳಾದ ಪ್ಲೇಗ್, ಕ್ಯಾಟ್ ಸ್ಕಾçಚರ್, ಟಿಕ್ ಪ್ಯಾರಾಲಿಸಿಸ್ ಇವು ನಿರಂತರ ಚಿಕಿತ್ಸೆಯಿಂದ ತತ್ಕಾಲಕ್ಕೆ ಉಪಶಮನವನ್ನು ಹೊಂದಿದAತೆ ಕಂಡರೂ ಇವು ಎಲ್ಲೋ ಮೂಲೆಯಲ್ಲಿ ಅಡಗಿಕೊಂಡಿದ್ದು ಒಮ್ಮಿಂದೊಮ್ಮೆಗೆ ಪುಟಿದೆದ್ದು ಮನುಷ್ಯರನ್ನು ಆಪೋಶನ ತೆಗೆದುಕೊಳ್ಳುತ್ತವೆ.

ರೇಬಿಸ್, ಲಿಪ್ಟೋಸ್ಪೆöÊರೋಸಿಸ್, ಲಾಸ್ಸಾಜ್ವರ, ಸ್ವೆöÊನ್ ಫ್ಲೂ, ಹಕ್ಕಿ ಜ್ವರ, ಡೆಂಗು ಜ್ವರ, ಕೊರೊನಾ ಮೊದಲಾದವು ಝೋನೋಸಿಸ್ ಕಾಯಿಲೆಗಳಲ್ಲಿ ಪ್ರಮುಖವಾದುದಾಗಿದ್ದು ಕೆಲವೊಮ್ಮೆ ವ್ಯಾಧಿಗ್ರಸ್ಥರಾದ ಮನುಷ್ಯರನ್ನು ಪ್ರತ್ಯೇಕವಾಗಿ ಕೂಡಿಸಿಡುವುದು, ಮೂಗು ಬಾಯಿಗಳಿಗೆ ಕವಚವನ್ನು ಧರಿಸಿಕೊಂಡು ಬೀದಿಗೆ ಇಳಿಯುವುದು, ಕೈಕಾಲುಗಳಲ್ಲಿ ಅತಿ ಹೆಚ್ಚಿನ ಸ್ಪಚ್ಛತೆಯನ್ನು ಕಾಪಾಡುವುದು ಮೊದಲಾದವು, ಕೆಲವು ಪ್ರಾಣಿಜನ್ಯ ವ್ಯಾಧಿಗಳಿಗೆ ತಡೆಹಾಕುವ ವಿಧಾನಗಳಾದರೆ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಮುಚ್ಚುವುದು ಮೊದಲಾದ ಕ್ರಮಗಳಿಂದ ಸೊಳ್ಳೆ ವಂಶದ ಅಭಿವೃದ್ಧಿಗೆ ತಡೆ ಹಾಕುವುದು, ಸೊಳ್ಳೆಪರದೆಯ ಒಳಗೆ ಮಲಗುವುದು, ರಾತ್ರಿ ತುಂಬುತೋಳಿನ ಅಂಗಿಯನ್ನು ಧರಿಸಿ ಓಡಾಡುವುದು, ಸೊಳ್ಳೆಯನ್ನು ಓಡಿಸುವ ಕಾಯಿಲ್, ಅಗರಬತ್ತಿಯನ್ನು ಕೋಣೆಯೊಳಗೆ ಉರಿಸುವುದು ಮೊದಲಾದ ಕ್ರಮಗಳನ್ನು ಅನುಸರಿಸುವುದರ ಮೂಲಕ ಡೆಂಗು ಕಾಯಿಲೆಯನ್ನು ನಿಗ್ರಹಿಸಬಹುದು. ನಮ್ಮ ಸಾಕು ನಾಯಿಗಳನ್ನು ಮತ್ತು ಪಶುಗಳನ್ನು ಸಮಯಕ್ಕೆ ಸರಿಯಾಗಿ ಪಶುವೈದ್ಯರಲ್ಲಿಗೆ ಒಯ್ದು ಚುಚ್ಚು ಮದ್ದು ನೀಡುವುದು, ಬೀದಿನಾಯಿಗಳು ಕಚ್ಚದಂತೆ ಎಚ್ಚರವಹಿಸುವುದು ಮೊದಲಾದುವು ರೇಬಿಸ್ ತಡೆಗೆ ಸಾಧ್ಯತೆಗಳಾಗಿವೆ. ಅದೇ ರೀತಿಯಲ್ಲಿ ಹಣ್ಣಿನ ಮರಗಳಲ್ಲಿ ಪಕ್ಷಿಗಳು ಕಚ್ಚಿರುವ ಹಣ್ಣನ್ನು ಮನುಷ್ಯರು ತಿನ್ನದಿರುವುದು ಸಹ ರೇಬಿಸ್ ಬರದಂತೆ ತಡೆಯುತ್ತವೆ.

ಬಾವಲಿಗಳು ಸಿಪ್ಪೆಯನ್ನು ತಿಂದುಹಾಕಿ ತಂದ ಕಾಫಿ ಹಣ್ಣುಗಳನ್ನು ಒಣಗಿಸಿ ಬಳಸುವುದು ಸಹ ಬೇನೆಗೆ ಆಮಂತ್ರಣ ಕೊಟ್ಟಂತಾಗುತ್ತದೆ.

ಒಟ್ಟಿನಲ್ಲಿ ಮನುಷ್ಯನಿಗೆ ಪ್ರಾಣಿಗಳ ಸಾಕುವಿಕೆಯಲ್ಲಿ ಅದೆಷ್ಟೇ ವ್ಯಾಮೋಹವಿದ್ದರೂ ಎಲ್ಲ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಪಶುವೈದ್ಯರಿಂದ ಲಸಿಕೆಯನ್ನು ಕೊಡಿಸಲೇಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ನೀರನ್ನು ಚೆನ್ನಾಗಿ ಕುದಿಸಿ ಕುಡಿಯುವುದು, ಹೊಳೆಯಲ್ಲಿ ಹರಿಯುವ ನೀರನ್ನು ಕುಡಿಯಲು ಬಳಸದೇ ಇರುವುದು, ಬೀದಿ ನಾಯಿಗಳನ್ನು ಮುಟ್ಟದಿರುವುದು ಮೊದಲಾದವು ಝೋನೋಟಿಕ್‌ನ ಕಬಂಧಬಾಹುವನ್ನು ಕತ್ತರಿಸಿಹಾಕಲು ಕೆಲವು ನಿಯಮಗಳಾಗಿವೆ.

ಹೀಗೆ ಮನುಷ್ಯರ ಮುಂಜಾಗರೂಕತೆ, ವಿಜ್ಞಾನಿಗಳಿಂದ ಸೂಕ್ತ ಚಿಕಿತ್ಸೆಯ ಆವಿಷ್ಕಾರಗಳಿಂದ ಮುಂದಿನ ದಿನಗಳಲ್ಲಿ ಈ ಅನ್ಯಜೀವಿಗಳಿಂದ ಹರಡುವ ವ್ಯಾಧಿಯು ಕೊನೆಗೊಳ್ಳಲಿ ಎನ್ನುವುದು ನಮ್ಮೆಲ್ಲರ ಹಾರೈಕೆಯಾಗಿದೆ.

- ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು.

ಮೊ. ೯೧೪೧೩೯೫೪೨೬.