ಮಡಿಕೇರಿ, ಜು. ೫: ಕುಶಾಲನಗರದ ಬಿಸಿಎಂ ಬಾಲಕಿಯರ ವಸತಿ ನಿಲಯದಿಂದ ಆಹಾರ ಸಾಮಗ್ರಿ ಸೇರಿದಂತೆ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರರು ತಪ್ಪಿತಸ್ಥ ಸಿಬ್ಬಂದಿ ಅಮಾನತಿಗೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರದ ಸಾಮಾಜಿಕ ಹೋರಾಟಗಾರ ಬಿ.ಡಿ. ಅಣ್ಣಯ್ಯ, ತಾವರೆಕೆರೆ ಬಳಿಯ ವಸತಿ ನಿಲಯದಲ್ಲಿ ಸುಮಾರು ೨೨೦ ವಿದ್ಯಾರ್ಥಿಗಳಿದ್ದು, ಇಲ್ಲಿಗೆ ಬಂದ ೧೦೦ ಲೀಟರ್ ಎಣ್ಣೆ, ಸಂಬಾರ ಪದಾರ್ಥ, ಆಹಾರ ಉತ್ಪನ್ನ ಸೇರಿದಂತೆ ಕೆಲ ವಸ್ತುಗಳನ್ನು ಅಕ್ರಮವಾಗಿ ಗೌಡ ಸಮಾಜ ಬಳಿಯ ನರ್ಸಿಂಗ್ ವಸತಿ ನಿಲಯಕ್ಕೆ ಸಾಗಾಟ ಮಾಡುತ್ತಿರುವ ದೂರು ವಿದ್ಯಾರ್ಥಿಗಳಿಂದ ಬಂದ ಹಿನ್ನೆಲೆ ಪೊಲೀಸರ ಸಹಕಾರದೊಂದಿಗೆ ಜೂನ್ ೨೬ ರಂದು ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನರ್ಸಿಂಗ್ ವಸತಿ ನಿಲಯದ ಕೋಣೆ, ಶೌಚಾಲಯದಲ್ಲಿ ವಸ್ತುಗಳನ್ನು ಬಚ್ಚಿಟ್ಟಿದ್ದು, ವಿಚಾರಣೆ ಸಂದರ್ಭ ಅಕ್ರಮವಾಗಿ ವಸ್ತುಗಳನ್ನು ಸಾಗಾಟ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ದೂರು ನೀಡಲು ತಾಲೂಕು ಅಧಿಕಾರಿಯನ್ನು ಸಂಪರ್ಕಿಸಿದ ಸಂದರ್ಭ ಅವರು ಕರೆ ಸ್ವೀಕರಿಸಲಿಲ್ಲ. ನಂತರ ಜಿಲ್ಲಾ ಮಟ್ಟದ ಅಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿ ಅಗತ್ಯ ದಾಖಲೆ, ಫೋಟೋ, ವೀಡಿಯೋಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಲಾಯಿತು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದ ಅಧಿಕಾರಿ ಇದುವರೆಗೂ ಯಾವುದೇ ಕ್ರಮವನ್ನೂ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಿಬ್ಬಂದಿಯಿAದ ಕಿರುಕುಳವಾಗುತ್ತಿದ್ದು, ಆಹಾರವೂ ಸಮರ್ಪಕವಾಗಿ ಒದಗಿಸುತ್ತಿಲ್ಲ. ಈ ಅಕ್ರಮದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಜಿಲ್ಲಾ ಸಂಚಾಲಕ ಎಲ್.ಎಂ. ನಾಗರಾಜು, ಸಾಮಾಜಿಕ ಹೋರಾಟಗಾರ ಕೆ.ಬಿ. ಸೋಮಣ್ಣ ಹಾಜರಿದ್ದರು.