ಶನಿವಾರಸಂತೆ, ಜು. ೪: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ಭೂಮಿ ಶೀತ ಹಿಡಿದಿದೆ. ಅತಿವೃಷ್ಠಿಯಿಂದ ಕಾಫಿ ಬೆಳೆಗಾರರಲ್ಲಿ ತೋಟದಲ್ಲಿ ಕಾಫಿ ಕಾಯಿ ಉದುರುತ್ತಿರುವ ಬಗ್ಗೆ ಆತಂಕ ಮೂಡಿದೆ. ಭತ್ತ ಬೆಳೆವ ರೈತರು ಬೀಜ ಅಗೆ ಹಾಕಲು ನಿಗದಿತ ಸಮಯದ ನಿರೀಕ್ಷೆಯಲ್ಲಿದ್ದಾರೆ.
ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಸುರಿದ ವಾಡಿಕೆ ಮಳೆಗೆ ಹೂವು ಅರಳಿ ಕಾಯಿಗಟ್ಟಿತ್ತು. ಬೆಳೆಗಾರರು ಉತ್ತಮ ಫಸಲಿನ ಬಗ್ಗೆ ಸಂತಸ ಭರಿತರಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಆರಿದ್ರ ಮಳೆ ಜಿಟಿಜಿಟಿ ಸುರಿಯುತ್ತಿದೆ. ಮಳೆ ಪ್ರಮಾಣ ಜಾಸ್ತಿಯಾಗಿ ಜೋರಾಗಿ ಸುರಿಯಲಾರಂಭಿಸಿದರೇ, ಪ್ರಸ್ತುತ ವರ್ಷ ಕಾಫಿ ಬೆಳೆ ಸಂಪೂರ್ಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂಬ ಆತಂಕ ಶಿಡಿಗಳಲೆ ಗ್ರಾಮದ ಬೆಳೆಗಾರ ಎಸ್.ಎಂ. ಉಮಾಶಂಕರ್ ಮತ್ತಿತರ ಬೆಳೆಗಾರರಲ್ಲಿ ಮೂಡಿದೆ.
ಈ ವ್ಯಾಪ್ತಿಯಲ್ಲಿ ಭತ್ತ ಬೇಸಾಯ ಕಡಿಮೆಯಾಗಿದ್ದು ಶೇ. ೨೦ ರಷ್ಟು ರೈತರು ಮಾತ್ರ ಬೆಳೆಯುತ್ತಾರೆ. ನಾಲ್ಕು ತಿಂಗಳ ಅವಧಿಯ ಭತ್ತದ ಬೀಜದ ಅಗೆ ಹಾಕುವ ಸಿದ್ಧತೆ ಗದ್ದೆಗಳಲ್ಲಿ ನಡೆಯುತ್ತಿದೆ. ಭತ್ತ ಬೆಳೆಯುತ್ತಿದ್ದ ಬಹುತೇಕ ರೈತರ ಒಲವು ಅಡಿಕೆ ಬೆಳೆಯತ್ತ ವಾಲಿದೆ. ಶೇ. ೭೦ ರಷ್ಟು ಗದ್ದೆಗಳಲ್ಲಿ ಅಡಿಕೆ ಬೆಳೆ ತಲೆಯೆತ್ತಿದೆ. ಶೇ. ೧೦ ರಷ್ಟು ರೈತರು ತಮ್ಮ ಗದ್ದೆಗಳನ್ನು ಹಾಳು ಬಿಟ್ಟಿರುತ್ತಾರೆ.
ಹೋಬಳಿಯಾದ್ಯಂತ ವಿವಿಧ ಗ್ರಾಮಗಳಲ್ಲಿ ಮಳೆ ಪ್ರಮಾಣದಲ್ಲಿ ವ್ಯತ್ಯಾಸವಿದೆ. ವರ್ಷ ಪ್ರಾರಂಭದಿAದ ಈವರೆಗೆ ಒಟ್ಟು ೩೫ - ೪೦ ಇಂಚು ಮಳೆಯಾಗಿದೆ. ತೋಟಗಳಲ್ಲಿ ಗೊಬ್ಬರ ಹಾಕುವ ಕೆಲಸ ಮುಗಿಸಿದ ಬೆಳೆಗಾರರು ಕಚಡ ಕೆಲಸ ಮಾಡಿಸುತ್ತಿದ್ದಾರೆ. ಗದ್ದೆಗಳಲ್ಲಿ ಕೆಲವು ರೈತರು ಈಗಾಗಲೇ ಅಗೆ ಹಾಕಿದ್ದರೇ ಮತ್ತೆ ಕೆಲವರು ಬೀಜದ ಭತ್ತ ಖರೀದಿಸಿ ಸಿದ್ಧತೆ ನಡೆಸಿದ್ದಾರೆ. ಈ ವರ್ಷದ ಮುಂಗಾರು ಮಳೆ ಕೃಷಿಕರ ಬದುಕಲ್ಲಿ ಕಣ್ಣಮುಚ್ಚಾಲೆಯಾಡುತ್ತಿದೆ.