ಚೆಯ್ಯಂಡಾಣೆ, ಜು. ೪: ಕೋಕೇರಿ, ನರಿಯಂದಡ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ನಾಶಪಡಿಸುತ್ತಿವೆ.
ಈ ವ್ಯಾಪ್ತಿಯ ಸ್ಥಳೀಯ ಕಾಫಿ ತೋಟಗಳೇ ಕಾಡಾನೆ ಆವಾಸ ಸ್ಥಳಗಳಾಗಿ ಮಾರ್ಪಟ್ಟಿದೆ. ಕೋಕೇರಿ ಗ್ರಾಮದ ನೆಲ್ಲಮಕ್ಕಡ ವಿವೇಕ್ ಹಾಗೂ ಬೆಳಿಯಂಡ್ರ ಲಕ್ಕಿ ಅವರ ತೋಟಗಳಿಗೆ ಲಗ್ಗೆಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದ ಕಾಫಿ, ಅಡಿಕೆ, ಒಳ್ಳೆಮೆಣಸು, ಬಾಳೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟುಮಾಡಿದೆ. ನರಿಯಂದಡ ಗ್ರಾಮದ ಸುಮಂತ್ ಅವರ ತೋಟದಲ್ಲಿ ಕಾಡಾನೆಗಳ ಹಿಂಡು ಸಂಚರಿಸುತ್ತಿವೆ. ಈ ವ್ಯಾಪ್ತಿಯ ಹಲವಾರು ಕುಟುಂಬಸ್ಥರ ತೋಟಗಳಿಗೆ ಕಾಡಾನೆ ಲಗ್ಗೆ ಇಟ್ಟು ದಾಂಧಲೆ ನಡೆಸಿದ್ದು, ಇದರಿಂದ ತೋಟದಲ್ಲಿ ಬೆಳೆದ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ. ಇದರಿಂದ ಗ್ರಾಮದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಗ್ರಾಮದಲ್ಲಿ ನಡೆದಾಡಲು ಜನರು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ, ಕಾರ್ಮಿಕರಂತೂ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಇಷ್ಟೆಲ್ಲ ಹಾನಿ ಸಂಭವಿಸುತ್ತಿದ್ದರು ಆನೆಗಳು ತೋಟದಲ್ಲೇ ಬೀಡುಬಿಟ್ಟರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಹಾಗೂ ಸರಕಾರ ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಕಾಡಾನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕೆAದು ಒತ್ತಾಯಿಸಿದ್ದಾರೆ.