ಚಿಕ್ಕಮಗಳೂರು, ಜು. ೪ : ಕಳೆದ ೧೦ ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರಣ್ಯ ಇಲಾಖೆಯ ಗಾರ್ಡ್ ಶರತ್ (೩೩) ಮೃತದೇಹ ಶುಕ್ರವಾರ ಬೆತ್ತಲಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ನಾಪತ್ತೆಯಾಗಿದ್ದ ಶರತ್‌ಗಾಗಿ ೧೦ ದಿನಗಳಿಂದ ಶೋಧ ನಡೆಯುತ್ತಿತ್ತು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅರಣ್ಯ ವಿಭಾಗ ದಿಂದ ಸಖರಾಯಪಟ್ಟಣ ಅರಣ್ಯ ಇಲಾಖೆಗೆ ಶರತ್ ವರ್ಗಾವಣೆಯಾಗಿದ್ದರು.
ತಾ. ೨೪ ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಶರತ್‌ಗಾಗಿ ೫೫೦ ಹೆಕ್ಟೇರ್ ನೀಲಗಿರಿ ಪ್ಲಾಂಟೇಷನ್‌ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲಿರುಳು ಹುಡುಕಾಟದಲ್ಲಿ ತೊಡಗಿದ್ದರು. ಹುಡುಕಾಟದ ವೇಳೆ ಶರತ್ ಬೈಕ್ ಒಂದು ಕಡೆ ಮತ್ತೊಂದು ಕಡೆ ಬಟ್ಟೆ, ಪರ್ಸ್ ಪತ್ತೆಯಾಗಿತ್ತು. ಶರತ್ ಶವ ಸಿಕ್ಕ ಸ್ಥಳದಿಂದ ೨೦ ಕಿ.ಮೀ. ದೂರದಲ್ಲಿ ಆತನ ಮೊಬೈಲ್ ಕೂಡ ಪತ್ತೆಯಾಗಿತ್ತು. ಹುಡುಕಾಟ ಮುಂದುವರೆಸಿದ ಸಂದರ್ಭ ಶರತ್ ಶವ ಬೆತ್ತಲಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
(ಮೊದಲ ಪುಟದಿಂದ) ಮಳೆ ಬೀಳುತ್ತಿದ್ದಾಗಲೂ ಚಳಿಯಲ್ಲಿ ಬಟ್ಟೆಯನ್ನೆಲ್ಲಾ ಏಕೆ ಬಿಚ್ಚಿದ್ದ ಎಂಬುದು ನಿಗೂಢವಾಗಿದೆ. ಅಲ್ಲದೆ ಸಾವು ಹೇಗೆ ಸಂಭವಿಸಿತು ಎಂಬುದೂ ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬೈಕ್, ಬಟ್ಟೆ, ಪರ್ಸ್, ಮೊಬೈಲ್ ಎಲ್ಲವೂ ಒಂದೊAದು ಕಡೆ ದೊರಕಿರುವುದು ಪ್ರಕರಣದ ಸುತ್ತ ಅನುಮಾನದ ಹುತ್ತವನ್ನು ಸೃಷ್ಟಿಸಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಬಯಲಾಗಬೇಕಾಗಿದೆ.
ವಿಧಿ ವಿಜ್ಞಾನ ಅಧಿಕಾರಿಗಳು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದು ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
- ಕೋವರ್‌ಕೊಲ್ಲಿ ಇಂದ್ರೇಶ್