ಸಿದ್ದಾಪುರ, ಜು. ೩: ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿರುವ

ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಯಕ್ತಿ

ಧರಿಸಿದ್ದ ಬಟ್ಟೆ ಕೆರೆ ಬಳಿ ದೊರೆತಿರುವುದು ಸಂಶಯಕ್ಕೆ

ಎಡೆಮಾಡಿಕೊಟ್ಟಿದೆ.

ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ

ಗಂಗಾಧರ್ (೩೩) ನಾಪತ್ತೆಯಾದ ವ್ಯಕ್ತಿ. ಬೆಟ್ಟಗೇರಿ

ಗ್ರಾಮಕ್ಕೆ ತೋಟ ಕೆಲಸಕ್ಕೆಂದು ಗಂಗಾಧರ್ ತೆರಳಿದ್ದು,

ತಾ. ೨೭ ರಂದು ರಾತ್ರಿ ಪರಿಚಯಸ್ಥರಿಗೆ ಹಣ ನೀಡಿ ಬರುವುದಾಗಿ

ಸಹಕಾರ್ಮಿಕರಿಗೆ ಹೇಳಿ ಹೋದವರು ಹಿಂತಿರುಗಿ ಬಂದಿಲ್ಲ. ಹುಡುಕಾಟ

ನಡೆಸಿದಾಗಲೂ ಸುಳಿವು ಲಭ್ಯವಾಗದ ಹಿನ್ನೆಲೆ ಗಂಗಾಧರ್ ಕುಟುಂಬಕ್ಕೆ

ಮಾಹಿತಿ ನೀಡಿದ್ದಾರೆ.

ಪರಿಚಯಸ್ಥರು, ಬಂಧುಮಿತ್ರರನ್ನು ಸಂಪರ್ಕಿಸಿದಾಗಲೂ ಯಾವುದೇ

ಮಾಹಿತಿ ಲಭ್ಯವಾಗದ ಹಿನ್ನೆಲೆ ತಾಯಿ ಕಮಲ ಸಿದ್ದಾಪುರ ಠಾಣೆಗೆ ದೂರು

ನೀಡಿದ್ದಾರೆ. ಅನಂತರ ಭಾಗಮಂಡಲ ಠಾಣೆಗೂ ದೂರು ನೀಡಿದ್ದಾರೆ.

ಹುಡುಕಾಟ ನಡೆಸಿದ ಸಂದರ್ಭ ಕಾಫಿ ತೋಟದ ಒಳಗೆ ಇರುವ

ಕೆರೆಯ ಬಳಿಯೊಂದರಲ್ಲಿ ಗಂಗಾಧರ್ ಧರಿಸಿರುವ ಬಟ್ಟೆ ಲಭಿಸಿರುವುದು

ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಆತಂಕಕ್ಕೆ ಸಿಲುಕಿರುವ

ಕುಟುಂಬಸ್ಥರು ಸುಳಿವು ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಗೆ

ಮನವಿ ಮಾಡಿದ್ದಾರೆ.

ಗಂಗಾಧರ್ ತನ್ನ ಇಬ್ಬರು ಮಕ್ಕಳು ಹಾಗೂ ತಾಯಿಯೊಂದಿಗೆ

ನೆಲೆಸಿದ್ದು, ಪತ್ನಿ ಬಿಟ್ಟು ಹೋಗಿದ್ದಾರೆ. - ವರದಿ : ವಾಸು