ವೀರಾಜಪೇಟೆ, ಜು. ೩: ತಮ್ಮ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳು ಹಾಕುವ ಶ್ರಮವು ಕೇವಲ ಅವರ ಭವಿಷ್ಯವನ್ನು ಮಾತ್ರವಲ್ಲ ಒಂದು ಸಂಪೂರ್ಣ ಕುಟುಂಬದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂದು ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ಸಿ.ಇ.ಟಿ. ತರಬೇತುದಾರ ಡಾ. ಪ್ರಶಾಂತ್ ರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಚಾಣಕ್ಯ ಕೋಚಿಂಗ್ ಕೇಂದ್ರದ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬುಧವಾರ ನಡೆದ ಸಿ.ಇ.ಟಿ., ಜೆ.ಇ.ಇ. ಹಾಗೂ ನೀಟ್ ಪರೀಕ್ಷೆಯ ಮಹತ್ವ ಹಾಗೂ ಸಿದ್ಧತೆಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ನಗರ ಪ್ರದೇಶಗಳಿಗೆ ಹೋಲಿಸಿದಾಗ ಪುಟ್ಟ ಊರುಗಳಲ್ಲಿ ಕೆಲ ಕೊರತೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆಗೆ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ಬುದ್ಧಿವಂತರಾಗಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೆ ಉತ್ತಮ ಅಂಕಗಳಿಸುತ್ತಾರೆ. ಆದರೆ ಅಗತ್ಯ ಸಿದ್ಧತೆಯಿಲ್ಲವಾದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ವಿಫಲವಾಗುತ್ತಾರೆ. ಇದರಿಂದ ರಾಜ್ಯ ಹಾಗೂ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈ ಮುತ್ತು ಮಾತನಾಡಿ, ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಲಿಯಾಗಬಾರದು. ಬದುಕಿನಲ್ಲಿ ಶಿಸ್ತು ಇದ್ದರೆ ಮಾತ್ರ ಭವಿಷ್ಯದಲ್ಲಿ ಗುರಿ ಸಾಧನೆ ಸಾಧ್ಯ. ತಮ್ಮ ಓದು, ತಂದೆ ತಾಯಿಗಾಗಲಿ ಅಥವಾ ಶಿಕ್ಷಕರಿಗಾಗಿ ಅಲ್ಲ ತಮ್ಮ ಭವಿಷ್ಯಕ್ಕೆ ಎನ್ನುವುದನ್ನು ವಿದ್ಯಾರ್ಥಿಗಳು ಮೊದಲು ಮನಗಾಣಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರೆ, ಉತ್ತಮ ಉದ್ಯೋಗವನ್ನು ಪಡೆದು ಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಕೂಡ ಉತ್ತಮ ಅಂಕಗಳನ್ನು ಗಳಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ. ಹೇಮಂತ್, ಉಪನ್ಯಾಸಕಿಯರಾದ ರಶ್ಮಿ ಬಿ.ಎಂ ಹಾಗೂ ಅಶ್ವಿನಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಜೋಮೋನ್ ಥೋಮಸ್, ನೋಹ ವಿವೇಕ್, ಜಯಿದ್ ಹಾಗೂ ಮೋಹನಾಕ್ಷಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.