ಕುಶಾಲನಗರ, ಜು. ೧: ಬಹು ಉಪಯೋಗಿ ಅಗತ್ಯ ದಿನಬಳಕೆ ವಸ್ತು ಆಗಿರುವ ತೆಂಗಿನಕಾಯಿ ಇದೀಗ ದುಬಾರಿಯಾಗಿದೆ.

ಕಳೆದ ಹಲವು ವರ್ಷಗಳಿಂದ ಕಾಯಿ ಒಂದಕ್ಕೆ ೨೦ ರೂ ಇದ್ದ ದರ ಈಗ ದಿಢೀರನೆ ೫೦ ರಿಂದ ೬೦ ರೂಪಾಯಿಗೆ ಏರಿದೆ.

ದಿನನಿತ್ಯ ಅಡುಗೆ ಪೂಜಾ ಕೈಂಕರ್ಯ ಸೇರಿದಂತೆ ತೆಂಗಿನ ಎಣ್ಣೆ ತಯಾರಿ, ಮದುವೆ ಮುಂತಾದ ಸಮಾರಂಭಗಳ ಸಂದರ್ಭ ಬಳಕೆ ಆಗುವ ತೆಂಗಿನಕಾಯಿ ಕಳೆದ ಕೆಲವು ಸಮಯದಿಂದ ಮಾರುಕಟ್ಟೆಯಲ್ಲಿ ಕಾಯಿಗಳು ತೂಕದ ರೂಪದಲ್ಲಿ ಮಾರಾಟ ಆಗುತ್ತಿರುವುದನ್ನು ಕಾಣಬಹುದು.

ತೆಂಗಿನಕಾಯಿ ಇಳುವರಿ ಕ್ಷೀಣಗೊಂಡಿರುವುದು ಬೆಲೆ ಏರಿಕೆಗೆ ಕಾರಣ ಒಂದು ಕಡೆಯಾದರೆ, ಇನ್ನೊಂದೆಡೆ ಎಳನೀರು ಬಳಕೆ ಅತಿಯಾಗಿ ಆಗುತ್ತಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ರಸ್ತೆ ಬದಿಯಲ್ಲಿ ಮಾರಾಟವಾಗುವ ಎಳನೀರು ದರ ೫೦ ರಿಂದ ೬೦ ಕ್ಕೆ ಏರಿದ್ದು ಬಹುತೇಕ ತೋಟಗಳ ತೆಂಗಿನ ಮರದ ಎಳನೀರು ಬೇಡಿಕೆ ಏರಿಕೆಯಾಗಿರೋದು ತೆಂಗಿನಕಾಯಿ ಅಲಭ್ಯವಾಗಲು ಕಾರಣವಾಗಿದೆ.

ಇನ್ನೊಂದೆಡೆ ಕಳೆದ ಒಂದು ವರ್ಷದಿಂದ ತೆಂಗಿನ ಮರಗಳಿಗೆ ಕೆಲವು ಕಡೆ ರೋಗಭಾದೆಗಳು ಕೂಡ ಅಂಟಿಕೊAಡಿದ್ದು ಇಳುವರಿ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಕೃಷಿಕರು.

ಕುಶಾಲನಗರ ವ್ಯಾಪ್ತಿಯಲ್ಲಿ ತೆಂಗಿನ ಮರಗಳಿಗೆ ಕೋತಿಗಳ ಕಾಟ ಅತಿಯಾಗಿದ್ದು ತೆಂಗಿನ ಬೆಳೆ ನಷ್ಟವಾಗಲು ಕಾರಣವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಕೃಷಿಕರಾದ ಕೊಡಗನ ಹರ್ಷ.

ರಾಜ್ಯದ ಹಾಸನ ಚಾಮರಾಜನಗರ ಭಾಗದಿಂದ ತೆಂಗಿನಕಾಯಿ ಮೈಸೂರು ಹಾಗೂ ಕೊಡಗು ಜಿಲ್ಲೆಗೆ ಸರಬರಾಜು ಆಗುತ್ತಿದ್ದು ಆ ಭಾಗದಲ್ಲಿ ಕೂಡ ಎಳನೀರಿನ ಬೇಡಿಕೆ ಅಧಿಕ ಎಂದು ಶಕ್ತಿಯೊಂದಿಗೆ ಮಾಹಿತಿ ನೀಡಿರುವ ಕುಶಾಲನಗರದ ತೆಂಗಿನಕಾಯಿ ವ್ಯಾಪಾರಿ ಚಂದ್ರು, ನೆರೆಯ ತಮಿಳ್ನಾಡಿನಿಂದಲೂ ಈ ಭಾಗಗಳಿಗೆ ತೆಂಗಿನಕಾಯಿ ಸರಬರಾಜು ಆಗುತ್ತಿದೆ ಎನ್ನುತ್ತಾರೆ.

ಯಥೇಚ್ಛ ಎಳನೀರಿಗೆ ಬೇಡಿಕೆ ಇರೋ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಡುಗೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಕಾಯಿಗಳು ಬಳಕೆಯಾಗುತ್ತಿದ್ದು ಇದೀಗ ಅಂಗಡಿಗಳಲ್ಲಿ ಕೂಡ ಕಾಯಿಗಳ ಮಾರಾಟ ಕಂಡುಬರುತ್ತಿಲ್ಲ.

ಈ ನಡುವೆ ಕೆಲವು ಹೊರ ಜಿಲ್ಲೆಯ ವ್ಯಾಪಾರಿಗಳು ವಾಹನಗಳಲ್ಲಿ ತುಂಬಿ ಮನೆ ಮನೆಗಳಿಗೆ ಮಾರಾಟ ಮಾಡುತ್ತಿರುವ ದೃಶ್ಯ ಕೂಡ ಗೋಚರಿಸುತ್ತಿದೆ. ವಾರದ ಮಾರುಕಟ್ಟೆಗಳಲ್ಲಿ ಕೂಡ ತೆಂಗಿನಕಾಯಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದ್ದು ಈ ಹಿನ್ನೆಲೆಯಲ್ಲಿ ದಿನ ಕಳೆದಂತೆ ಕಾಯಿಯ ದರ ಏರಿಕೆ ಉಂಟಾಗಿದೆ.

- ಚಂದ್ರಮೋಹನ್