ಕುಶಾಲನಗರ, ಜು. ೧: ಕಾರ್ಮಿಕರ ಕಲ್ಯಾಣಕ್ಕೆ ಸಾಮಾಜಿಕ ಭದ್ರತೆ ಬಹಳ ಅವಶ್ಯಕವಾಗಿದೆ. ಮೂಲಭೂತ ಮಾನವ ಹಕ್ಕು ಮತ್ತು ಎಲ್ಲಾ ನಾಗರಿಕರಿಗೆ ಒದಗಿಸ ಬೇಕೆಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಕುಪೇಂದ್ರ ಅಯನೂರು ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕೊಡಗು ಹಾಗೂ ಮೈಸೂರು ವಿಭಾಗದ ಅಸಂಘಟಿತ ಕಾರ್ಮಿಕರ ಸಂಘಟನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರಲ್ಲಿ ಅರಿವಿನ ಕೊರತೆ, ಅಜ್ಞಾನ, ಅನಕ್ಷರತೆ ಮತ್ತು ಅಸಂಘಟನೆಯೇ ಸರ್ಕಾರವು ಒದಗಿಸುವ ವಿವಿಧ ಯೋಜನೆಗಳಿಂದ ವಂಚಿತರಾಗಲು ಕಾರಣ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದೆ.ಆದ್ದರಿಂದ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸದಸ್ಯತ್ವವನ್ನು ಪಡೆಯುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ ಮಾತನಾಡಿ, ರಾಜ್ಯದ ೨೦ ಜಿಲ್ಲೆಗಳ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ೨೦೧೪ ನೇ ಇಸವಿಯಲ್ಲಿ ೧೧ ವಲಯಗಳನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಿ ಕಾರ್ಮಿಕರ ಕಾರ್ಡ್ ವಿತರಣೆ ಮಾಡಿದೆ. ಆದರೆ ಬಹುತೇಕ ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯ ಗಳಿಂದ ವಂಚಿತಗೊAಡಿದ್ದಾರೆ ಎಂದರು. ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕನಿಗೆ ಕೆಲಸ ಮಾಡಲು ಸುರಕ್ಷಿತ ಮತ್ತು ಸುಭದ್ರ ವಾತಾವರಣಬೇಕು. ಜೊತೆಗೆ ಸರ್ಕಾರದ ಯೋಜನೆಗಳು ಅರ್ಹ ಕಾರ್ಮಿಕರಿಗೆ ಸಿಗಬೇಕು.

ಈ ನಿಟ್ಟಿನಲ್ಲಿ ಸಂಘಟನೆ ನಿರಂತರ ಹೋರಾಟ ನಡೆಸುತ್ತದೆ ಎಂದರು. ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಪೇಟ್ಕರ್,

ಪ್ರಧಾನ ಕಾರ್ಯದರ್ಶಿ ಇಂಧೂ ಬಸವನಗೌಡ, ಕಾರ್ಯದರ್ಶಿ ಮಮತಾ ರೆಡ್ಡಿ,ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಪಿ. ಮಹಾದೇವ, ಕೊಡಗು ಜಿಲ್ಲಾ ಘಟಕದ ಉಪಾಧ್ಯಕ್ಷ ರೆಹಮಾತ್, ಸಂಘಟನಾ ಕಾರ್ಯದರ್ಶಿ ಪದ್ಮಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗಿರೀಶ್, ಕಲಾವಿದ ಈ.ರಾಜು ಉಪಸ್ಥಿತರಿದ್ದರು.

ಇದೇ ಸಂದರ್ಭ ಕುಶಾಲನಗರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೃಷ್ಣ (ಕಿಟ್ಟಿ) ಹಾಗೂ ಪಿರಿಯಾಪಟ್ಟಣ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು.