ಸೋಮವಾರಪೇಟೆ, ಜು. ೧: ಅನಾರೋಗ್ಯದಿಂದ ಬಳಲುತ್ತಿರುವ ಪಟ್ಟಣದ ಲೋಡರ್ಸ್ ಕಾಲೋನಿ ನಿವಾಸಿ ಮಹಿಳೆಯೋರ್ವರನ್ನು ಭೇಟಿ ಮಾಡಿದ ಶಾಸಕ ಮಂತರ್ ಗೌಡ ಅವರು, ನೆರವಿನ ಭರವಸೆ ನೀಡಿದರು. ಪಟ್ಟಣದ ಲೋಡರ್ಸ್ ಕಾಲೋನಿ ನಿವಾಸಿ ಪೀರ್ ಪಾಷ ಅವರ ಪತ್ನಿ ಅನಾರೋಗ್ಯದಿಂದ ಹಲವಾರು ವರ್ಷಗಳಿಂದ ಬಳಲುತ್ತಿರುವುದನ್ನು ಮನಗಂಡ ಶಾಸಕರು, ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ತಾನೇ ಖುದ್ದಾಗಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರಲ್ಲದೆ, ಕುಟುಂಬಕ್ಕೆ ವೈಯಕ್ತಿಕ ಧನ ಸಹಾಯ ನೀಡಿದರು. ಈ ಸಂದರ್ಭ ಸೋಮವಾರಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶೀಲಾ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಡಿ.ಯು. ಕಿರಣ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಮ್, ನಗರ ಕಾಂಗ್ರೆಸ್ ಗೌರವ ಸಲಹೆಗಾರ ಹೆಚ್.ಸಿ. ನಾಗೇಶ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಚೇತನ್, ನಗರ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಜಮೀರ್, ಸೈಮನ್, ಶುಭ ಉಪಸ್ಥಿತರಿದ್ದರು.