ನಾಯಕತ್ವ ಬದಲಾವಣೆ ಚರ್ಚೆಗಳಿಲ್ಲ - ಸುರ್ಜೆವಾಲ
ಬೆಂಗಳೂರು, ಜು. ೧: ನಾಯಕತ್ವ ಬದಲಾವಣೆ ಕುರಿತು ಯಾವುದೇ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ತಳ್ಳಿಹಾಕಿದ್ದಾರೆ. ಶಾಸಕರು ಮತ್ತು ಸಂಸದರ ಸ್ವಂತ ಕ್ಷೇತ್ರಗಳಲ್ಲಿ ಆಗಿರುವ ಕೆಲಸಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಭೇಟಿಯಾಗುತ್ತಿದ್ದೇನೆ ಎಂದು ಸುರ್ಜೇವಾಲಾ ವಿವರಿಸಿದರು. ಕೆಲವರು ನಾಯಕತ್ವ ಬದಲಾವಣೆಯ ಬಗ್ಗೆ ಶಾಸಕರು ಮತ್ತು ಸಂಸದರ ಅಭಿಪ್ರಾಯ ಸಂಗ್ರಹಿಸುತ್ತಿದ್ದೀರಾ ಎಂದು ನನ್ನನ್ನು ಕೇಳಿದರು. ನಿನ್ನೆಯೂ ನಾನು ನೀಡಿದ್ದ ಉತ್ತರವನ್ನೇ ಇಂದು ಮತ್ತೆ ಹೇಳುತ್ತಿದ್ದೇನೆ. ಒಂದೇ ಪದದಲ್ಲಿ ಹೇಳುವುದಾದರೆ ಸ್ಪಷ್ಟವಾಗಿ ಇಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗಿದ್ದ ಸುರ್ಜೇವಾಲಾ, ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿರುವುದಾಗಿ ಹೇಳಿದರು.
ಯುಪಿಎಸ್ ಸ್ಫೋಟಗೊಂಡು ಇಬ್ಬರು ಸಾವು
ದಾವಣಗೆರೆ, ಜು. ೧: ಮನೆಯೊಂದರಲ್ಲಿದ್ದ ಯುಪಿಎಸ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಫೋಟಗೊಂಡ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಿಮಲಾಬಾಯಿ ಮತ್ತು ಕುಮಾರ್ ಜೈನ್ ಎಂದು ಗುರುತಿಸಲಾಗಿದೆ. ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಹಿರೇಮಠ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲಾಗಿದೆ. ರಾತ್ರಿ ವೇಳೆ ರುದ್ರಮುನಿ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ ಯುಪಿಎಸ್ ಉಪಕರಣವು ಅನಿರೀಕ್ಷಿತವಾಗಿ ಸ್ಫೋಟಗೊಂಡಿದ್ದು, ಇದರಿಂದ ದಟ್ಟ ಹೊಗೆ ಇಡೀ ಮನೆಗೆ ವ್ಯಾಪಿಸಿದೆ. ಘಟನೆ ಸಂಭವಿಸಿದಾಗ ಮನೆಯಲ್ಲಿ ಒಟ್ಟು ಆರು ಜನರಿದ್ದರು. ಇವರ ಪೈಕಿ ನಾಲ್ವರು ಮನೆಯ ಹಿಂದಿನ ಬಾಗಿಲಿನಿಂದ ತಕ್ಷಣವೇ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕುಮಾರ್ ಜೈನ್ ಮತ್ತು ವಿಮಲಾಬಾಯಿ ಅವರಿಗೆ ದಟ್ಟ ಹೊಗೆಯಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
ಬೆಂಗಳೂರು, ಜು. ೧: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದಂತಾಗಿದೆ. ಇಂದು ಬೆಳಗ್ಗಿನ ಜಾವ ೩ ಗಂಟೆ ಸುಮಾರಿಗೆ ಆಸ್ಪತ್ರೆಯ ಬರ್ನ್ಸ್ ಬ್ಲಾಕ್ನಲ್ಲಿರುವ ಸೆಮಿನಾರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಿಚ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಬೆಂಕಿ ಸಂಭವಿಸಿದೆ ಎನ್ನಲಾಗುತ್ತಿದೆ. ಅಗ್ನಿ ಅವಘಡದಲ್ಲಿ ರಿಜಿಸ್ಟರ್ ಬುಕ್, ಬೆಡ್ ಸುಟ್ಟು ಹೋಗಿದ್ದು, ಫ್ರಿಡ್ಜ್ಗೆ ಬೆಂಕಿ ತಗುಲಿ ಸುಟ್ಟ ಗಾಯಗಳ ವಿಭಾಗದ ಗ್ರೌಂಡ್ ಫ್ಲೋರ್ ಪೂರ್ತಿ ಬೆಂಕಿ ಆವರಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ.
ವಿಕಾಸ್ ಕುಮಾರ್ ಅಮಾನತು ರದ್ದಿಗೆ ಆದೇಶ
ಬೆಂಗಳೂರು, ಜು. ೧: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ಅವರ ಅಮಾನತು ರದ್ದುಗೊಳಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮಂಗಳವಾರ ಆದೇಶಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ೧೧ ಮಂದಿ ಮೃತಪಟ್ಟಿದ್ದು, ೬೪ ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರವು ಮ್ಯಾಜಿಸ್ಟಿçಯಲ್ ತನಿಖೆಗೆ ವಹಿಸಿತ್ತು. ಈ ಸಂಬAಧ ವಿಚಾರಣೆಗೆ ಹಾಜರಾಗಲು ಮಾಜಿ ಕಮಿಷನರ್ ದಯಾನಂದ ಮತ್ತು ಇಬ್ಬರು ಡಿಸಿಪಿಗಳು ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ನೋಟೀಸ್ ಜಾರಿ ಮಾಡಲಾಗಿತ್ತು. ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ವಿಕಾಸ್ ಕುಮಾರ್ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಕೆ. ಶ್ರೀವಾತ್ಸವ, ಸಂತೋಷ್ ಮೆಹ್ರಾ ನೇತೃತ್ವದ ಪೀಠವು ವಿಕಾಸ್ ಕುಮಾರ್ ಅಮಾನತು ರದ್ದುಪಡಿಸಿ ಆದೇಶ ಹೊರಡಿಸಿದೆ.
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ-ಐವರು ಕಾರ್ಮಿಕರು ಸಾವು
ವಿರುಧುನಗರ, ಜು. ೧: ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಶಿವಕಾಶಿ ಬಳಿಯ ಚಿನ್ನಕಾಮನ್ ಪಟ್ಟಿಯ ಖಾಸಗಿ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಸ್ಫೋಟದಿಂದ ಇಡೀ ಕಾರ್ಖಾನೆಯೇ ಸುಟ್ಟುಹೋಗಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆ ಸಂಬAಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ
ಚಂಡೀಗಢ, ಜು. ೧: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಉಪವಿಭಾಗದಲ್ಲಿ ಮೇಘಸ್ಫೋಟಗಳಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿ ಒಬ್ಬರು ಸಾವನ್ನಪ್ಪಿದ್ದು, ೧೮ ಜನ ನಾಪತ್ತೆಯಾಗಿದ್ದಾರೆ. ಅಲ್ಲದೆ ವಿವಿಧ ಸ್ಥಳಗಳಿಂದ ಕನಿಷ್ಟ ೪೧ ಜನರನ್ನು ರಕ್ಷಿಸಲಾಗಿದೆ. ಭಾರೀ ಮಳೆಯಿಂದ ಮಂಡಿ ಮತ್ತು ಕುಲ್ಲು ನಡುವಿನ ಅನೇಕ ಸ್ಥಳಗಳಲ್ಲಿ ಕಿರಾತ್ಪುರ-ಮನಾಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಮತ್ತು ವಾಹನ ಸವಾರರು ಇಡೀ ರಾತ್ರಿ ರಸ್ತೆ ಸುರಂಗಗಳಲ್ಲಿ ಸಿಲುಕಿಕೊಂಡಿದ್ದರು. ಮಂಡಿ ಜಿಲ್ಲೆಯಲ್ಲಿ ಕನಿಷ್ಟ ನಾಲ್ಕು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಮನೆಗಳು, ವಾಹನಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ ೧೨ ಮಕ್ಕಳು ಮತ್ತು ೪ ಮಹಿಳೆಯರು ಸೇರಿದಂತೆ ೧೬ ಜನರನ್ನು ರಕ್ಷಿಸಲಾಗಿದೆ. ರಿಕಿ ಗ್ರಾಮದ ಏಳು ಸದಸ್ಯರ ಕುಟುಂಬವನ್ನು ಸಹ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಔಷಧ ಘಟಕದಲ್ಲಿ ಸ್ಫೋಟ-ಮೃತರ ಸಂಖ್ಯೆ ೩೫ಕ್ಕೆ ಏರಿಕೆ
ಹೈದರಾಬಾದ್, ಜು. ೧: ಸಿಗಾಚಿ ಇಂಡಸ್ಟಿçÃಸ್ನ ಪಾಶಮೈಲಾರಂನಲ್ಲಿರುವ ಔಷಧ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೫ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ದೃಢಪಡಿಸಿದ್ದಾರೆ. ಅವಶೇಷಗಳಿಂದ ೩೧ ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಅಂತಿಮ ಹಂತ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು. ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪೆನಿಯ ರಿಯಾಕ್ಟರ್ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಸ್ಫೋಟಕ್ಕೆ ನಿಖರ ಕಾರಣ ಸಮಗ್ರ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.
ಟ್ರಂಪ್-ನೆತನ್ಯಾಹು ಭೇಟಿ
ವಾಷಿಂಗ್ಟನ್, ಜು. ೧: ಜುಲೈ ೭ ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ ಎಂದು ಅಮೇರಿಕಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಜಾ ಮತ್ತು ಇಸ್ರೇಲ್ ನಡುವಿನ ೨೦ ತಿಂಗಳ ಯುದ್ಧದ ಭೀಕರ ದೃಶ್ಯಗಳು ಹೃದಯವಿದ್ರಾವಕವಾಗಿವೆ. ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆ ಸೇರಿದಂತೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ನೆತನ್ಯಾಹು ಅವರನ್ನು ಒತ್ತಾಯಿಸುತ್ತೇನೆ ಎಂದು ಟ್ರಂಪ್ ತಿಳಿಸಿರುವುದಾಗಿ ವರದಿಯಾಗಿದೆ. ಗಾಜಾದಲ್ಲಿ ಕದನ ವಿರಾಮ ಒಪ್ಪಂದ ಏರ್ಪಡಲಿ. ಕೆಲವು ಪ್ಯಾಲೆಸ್ಟೀನಿಯನ್ನರು ಶಾಂತಿ ಮಾತುಕತೆ ಸಾಧ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಉತ್ತರ ಗಾಜಾದ ಕೆಲವು ಪ್ರದೇಶಗಳಲ್ಲಿ ಸಾಮೂಹಿಕ ಸ್ಥಳಾಂತರಕ್ಕೆ ಇಸ್ರೇಲ್ ಆದೇಶಿಸಿದೆ.