ಮಡಿಕೇರಿ, ಜೂ. ೩೦: ಕೊಡವ ಮಕ್ಕಡ ಕೂಟದ ೧೧೪ನೇ ಪುಸ್ತಕ, ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ರಚಿತ ೪ನೇ ಕೃತಿ "ಚೀತೆರ ಕಾಳ ಮುತ್ತ್ ಮಾಲೆ" ಕೊಡವ ಕವನ ಸಂಕಲನ ಬಿಡುಗಡೆಗೊಂಡಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೇಖಕಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಅವರು ಭಾಷೆಯ ಬೆಳವಣಿಗೆಯಲ್ಲಿ ಸಾಹಿತ್ಯ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದರು.
ಕಥೆ, ಕಾದಂಬರಿ, ನಾಟಕ, ಕವನ ಸಂಕಲನಗಳು ಸಾಹಿತ್ಯ ಕ್ಷೇತ್ರದ ಸುಂದರ ಮತ್ತು ಶಕ್ತಿಯುತ ಪ್ರಕಾರಗಳಾಗಿವೆ. ಕವನಗಳು ಭಾಷೆಯ ಬಲವನ್ನು ಹೆಚ್ಚಿಸುತ್ತವೆ, ಓದುಗರ ಜೊತೆ ಕವನ ಮಾತನಾಡುತ್ತದೆ, ಮನ ಮುಟ್ಟುತ್ತದೆ ಮತ್ತು ಹೊಸ ಆಯಾಮಗಳಿಗೆ ಕೊಂಡೊಯ್ಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು. ಸರ್ಕಾರದ ಅನುದಾನವಿಲ್ಲದಿದ್ದರೂ ಸಾಹಿತ್ಯ ಬೆಳವಣಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಜಿಲ್ಲೆಯ ಹಲವು ಬರಹಗಾರರು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕೂಟದ ಹಲವು ಪುಸ್ತಕಗಳಿಗೆ ಪ್ರಶಸ್ತಿಗಳು ಲಭಿಸಿವೆ. ಇನ್ನು ಮುಂದೆಯೂ ಕೂಟ ಬರಹಗಾರರಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.
"ಚೀತೆರ ಕಾಳ ಮುತ್ತ್ ಮಾಲೆ" ಕೊಡವ ಕವನ ಸಂಕಲನದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಮಾತನಾಡಿ, ಪುಸ್ತಕವು ೫೦ ಕವನಗಳನ್ನು ಒಳಗೊಂಡಿದ್ದು, ಸುಮಾರು ಐದು ವರ್ಷಗಳ ದಾಖಲೆಗಳ ಕವನಗಳಾಗಿವೆ. ಅಲ್ಲದೇ ಅಧ್ಯಯನದ ಸಂದರ್ಭ ಸಿಕ್ಕ ಕೆಲವು ವಿಚಾರಗಳನ್ನು ಕವನ ರೂಪದಲ್ಲಿ ಹೊರತರಲಾಗಿದೆ. ಈ ಕವನಗಳಲ್ಲಿ ಹಲವು ನೀತಿ ಪಾಠಗಳಿಂದ ಕೂಡಿದೆ. ಲೇಖಕಿಯ ತಂದೆ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕಂಬೀರAಡ ಕಿಟ್ಟು ಕಾಳಪ್ಪ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೇಖಕಿಯ ತಾಯಿ ಕಂಬೀರAಡ ಮುತ್ತಮ್ಮ ಹಾಗೂ ಸಮಾಜ ಸೇವಕ ಹಂಚೆಟ್ಟಿರ ಮನು ಮುದ್ದಪ್ಪ ಉಪಸ್ಥಿತರಿದ್ದರು.