ಸುಂಟಿಕೊಪ್ಪ, ಜೂ. ೩೦: ಭಾರಿ ಮಳೆ ಗಾಳಿಗೆ ಅಥವಾ ಇನ್ನಿತರೆ ರೀತಿಯಲ್ಲಿ ಪ್ರಕೃತಿ ಮುನಿದು ಅನಾಹುತ ಸಂಭವಿಸಿದಲ್ಲಿ ಸಂಕಷ್ಟಕ್ಕೆ ಸಿಲುಕುವ ಜನ, ಜಾನುವಾರುಗಳ ಜೀವ ರಕ್ಷಣೆಗೆ ಈ ತಂಡ ಸದಾ ಸನ್ನದ್ಧವಾಗಿರುತ್ತದೆ. ನಿಸರ್ಗ ರೌದ್ರಾವತಾರ ತಾಳಿದಾಗ ಎಲ್ಲರೂ ಕೂಡ ಅವರವರ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಆದರೆ ಈ ತಂಡದವರು ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಲು ತವಕಿಸುತ್ತಾರೆ. ವಿಷಮ ಪರಿಸ್ಥಿತಿಯ ಬಗ್ಗೆ ಮಾಹಿತಿ ಅರಿತಲ್ಲಿ ಕೂಡಲೇ ತಂಡದವರನ್ನು ಸೇರಿಸಿಕೊಂಡು ಪ್ರಯಾಸಕರ ಹಾಗೂ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸಿಕೊಂಡೇ ಅನಾಹುತ ಸಂಭವಿಸಿದ ಸ್ಥಳಕ್ಕೆ ತೆರಳಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಂತ್ರಸ್ತರ ಜೀವ ರಕ್ಷಣೆಗೆ ತವಕಿಸುತ್ತಾರೆ. ಹೆಸರಿಗೆ ತಕ್ಕಂತೆ ಆಪತ್ತಿಗೆ ಸಿಲುಕಿದವರ ಪಾಲಿಗೆ ಈ ತಂಡ ಆಪ್ತಮಿತ್ರ ಆಗಿದೆ.
ಸುಂಟಿಕೊಪ್ಪದಲ್ಲಿ ಸಮಾಜ ಸೇವೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಜೀವರಕ್ಷಕ ಆಪ್ತಮಿತ್ರ ತಂಡ ಕಳೆದ ಮೇ ತಿಂಗಳ ೨೦ರ ನಂತರ ಜುಲೈಯಲ್ಲಿ ಸುಮಾರು ೧೦ ದಿನಗಳ ಕಾಲ ಸುರಿದ ಗಾಳಿ ಮಳೆಗೆ ಜಿಲ್ಲೆಯ ಹಲವು ಕಡೆ ತಲ್ಲಣಗೊಂಡಿದ್ದ ಸಂದರ್ಭದಲ್ಲಿ ಮತ್ತು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹಲವು ಮರ ಹಾಗೂ ವಿದ್ಯುತ್ ಕಂಬಗಳು ವಾಸದ ಮನೆಗಳ ಮೇಲೆ ಹಾಗೂ ರಸ್ತೆಗಳ ಮೇಲೆ ಉರುಳಿ ಬಿದ್ದು ಜನಜೀವನ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ವರುಣನ ಆರ್ಭಟ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಸಂದರ್ಭ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಮಳೆ ಗಾಳಿಯನ್ನು ಲೆಕ್ಕಿಸದೇ ತನ್ನದೇ ಆದ ವಾಹನದಲ್ಲಿ ಮರ ಕುಯ್ಯುವ ಯಂತ್ರ ಹಾರೆ, ಪಿಕಾಸಿ ಹಗ್ಗ ಹಾಗೂ ಇತರೆ ಪರಿಕರಗಳೊಂದಿಗೆ ಸುಮಾರು ೧೫ ಜನರ ಸ್ವಯಂ ಸೇವಕರ ತಂಡವನ್ನು ಸಿದ್ಧಪಡಿಸಿಕೊಂಡು ಮಳೆಗಾಳಿಯನ್ನು ಲೆಕ್ಕಿಸದೇ ರಕ್ಷಣಾ ಕಾರ್ಯಕ್ಕಿಳಿದರು. ಇವರ ಈ ತಂಡವೇ ಜೀವರಕ್ಷಕ ಆಪ್ತಮಿತ್ರ ತಂಡ. ಇವರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಆಲಿಕುಟ್ಟಿ, ರಫೀಕ್ ಖಾನ್, ಶಬೀರ್ ರವರು ಕೈ ಜೋಡಿಸುತ್ತಿದ್ದಾರೆ. ೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಆಪ್ತಮಿತ್ರ ತಂಡವು ನಿರಂತರವಾಗಿ ಜೀವ ರಕ್ಷಣೆಯ ಕಾರ್ಯನಿರ್ವಹಿಸಿತ್ತು. ಜಿಲ್ಲೆಯ ಮಾದಾಪುರ, ಹಟ್ಟಿಹೊಳೆ, ಹೆಮ್ಮೆತ್ತಾಳು, ಮಕ್ಕಂದೂರು, ಹಾಲೇರಿ, ಕಾಂಡನಕೊಲ್ಲಿ ಹಾಗೂ ಮಡಿಕೇರಿಯ ೨ನೇ ಮೊಣ್ಣಂಗೇರಿ, ಮದೆನಾಡು, ಜೋಡುಪಾಲಗಳಿಗೆ ತೆರಳಿ ರಕ್ಷಣೆ ಕಾರ್ಯ ಮಾಡಿದ್ದಾರೆ. ಪ್ರಸಕ್ತ ಮುಂಗಾರಿನ ಅವಧಿಯಲ್ಲಿ ಸಂಭವಿಸಬಹುದಾದ ಅನಾಹುತಗಳಿಂದ ಜನ, ಜಾನುವಾರುಗಳನ್ನು ರಕ್ಷಿಸುವ ಕಾರ್ಯಕ್ಕೆ ಈಗಾಗಲೇ ಸಜ್ಜಾಗಿದೆ. ಕಳೆದ ೫ ವರ್ಷಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಎನ್.ಡಿ.ಆರ್.ಎಫ್. ತಂಡದೊAದಿಗೆ ಈ ತಂಡದವರು ೧೫ ದಿನಗಳ ತರಬೇತಿಯನ್ನು ಪಡೆದಿದ್ದು, ಇಂತಹ ಕಾರ್ಯಕ್ಕಾಗಿ ಜೀವ ರಕ್ಷಣೆಯ ಆಪ್ತಮಿತ್ರ ತಂಡ ಎಂದು ನಾಮಕರಣ ಮಾಡಿರುತ್ತದೆ. ಕಳೆದ ಎರಡು ತಿಂಗಳ ಹಿಂದೆ ಈ ತಂಡವು ಸುಂಟಿಕೊಪ್ಪ ೧ನೇ ವಿಭಾಗದ ಮನೆಯೊಂದ ರಲ್ಲಿ ಅನಿಲ ಸೋರಿಕೆಯಾದ ಸಂದರ್ಭ ಹೆಚ್ಚಿನ ಅನಾಹುತ ಉಂಟಾಗುವು ದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿರುತ್ತದೆ. ಒಟ್ಟಿನಲ್ಲಿ ಪ್ರಕೃತಿ ಮುನಿಯಬಹುದಾದ ಮಳೆಗಾಲದ ಸಂದರ್ಭದಲ್ಲಿ ಎಲ್ಲಾ ಅನಾಹುತ ಗಳಿಂದ ಸಂತ್ರಸ್ತರನ್ನು ಪಾರುಮಾಡಲು ಎಲ್ಲಾ ರೀತಿಯ ತರಬೇತಿ ಯೊಂದಿಗೆ ಈ ತಂಡ ಸುಂಟಿಕೊಪ್ಪ ಸೇರಿದಂತೆ ಜಿಲ್ಲೆಯ ನಾನಾ ಭಾಗಕ್ಕೆ ತೆರಳಲು ಸಜ್ಜಾಗಿರುತ್ತಾರೆ. -ರಾಜುರೈ, ಸುಂಟಿಕೊಪ್ಪ.