ವೀರಾಜಪೇಟೆ, ಜೂ. ೩೦: ಜೋಪಡಿಯಲ್ಲಿ ವಾಸಿಸುತ್ತ ಜೀವನ ಸಾಗಿಸುತ್ತಿದ್ದ ಕಾರ್ಮಿಕ ದಂಪತಿಗೆ ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘ ಅಧ್ಯಕ್ಷ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಮತ್ತೊಮ್ಮೆ ನೆರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ.
ಈಗಾಗಲೇ ಮೂರು ಕುಟುಂಬಗಳಿಗೆ ಸೂರು ಒದಗಿಸಿ ಆಶ್ರಯದಾತರಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿರುವ ಗಣೇಶ್ ಅವರು ಇದೀಗ ನಾಲ್ಕನೆಯ ಮನೆಯನ್ನು ವೀರಾಜಪೇಟೆ ಸಮೀಪದ ಬಾಳುಗೋಡು ಗ್ರಾಮದ ಕಂಡಿಮಕ್ಕಿ ನಿವಾಸಿ ಪಿ.ಯು. ಕಿರಣ್ ಹಾಗೂ ಬೋಜಮ್ಮ ದಂಪತಿಗೆ ಹಸ್ತಾಂತರಿಸಿದರು.
ಗಣೇಶ್ ಅವರು ಹಲವು ವರ್ಷಗಳಿಂದ ಸಮಾಜಮುಖಿಯಾಗಿ ತೊಡಗಿಸಿಕೊಂಡು ಬಡವರಿಗೆ ನೆರವಾಗುತ್ತಿದ್ದಾರೆ. ನಿರ್ಮಿಸಿದ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಗಣೇಶ್ ಅವರನ್ನು ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಸನ್ಮಾನಿಸಿ ಗೌರವಿಸಿತು.
(ಮೊದಲ ಪುಟದಿಂದ) ಈ ಸಂದರ್ಭ ಮಾತನಾಡಿದ ಬಿ.ಎಂ.ಗಣೇಶ್ ಅವರು, ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಬರುವ ಸಂಬಳದಲ್ಲಿಯೇ ಉಳಿತಾಯ ಮಾಡುವ ಅಭ್ಯಾಸ ರೂಢಿಸಿ ಕೊಂಡರಷ್ಟೆ ಆರ್ಥಿಕ ಸಂಕಷ್ಟದಿAದ ದೂರ ಬರಲು ಸಾಧ್ಯ. ತನ್ನ ಆದಾಯದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದೇನೆ. ಈಗಾಗಲೇ ಮೂರು ಮನೆಗಳನ್ನು ನೀಡಿದ್ದೇನೆ. ಏಳು ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ. ಸೇವೆ ಎಂಬುದಕ್ಕೆ ಯಾವುದೇ ಇತಿಮಿತಿಗಳಿಲ್ಲ. ನಿರ್ಮಿಸಿದ ಮನೆಗಳಲ್ಲಿ ಕೆಲವು ಮನೆಗಳಿಗೆ ಶೌಚಾಲಯ ವ್ಯವಸ್ಥೆಗಳಿಲ್ಲ. ಸರ್ಕಾರ ಮತ್ತು ಸ್ಥಳೀಯ ಆಡಳಿತ ಈ ಸಂಬAಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
‘ನಮ್ಮ ಪರಿಸ್ಥಿತಿಯನ್ನು ಅರಿತು ಗಣೇಶ್ ಅವರು ಮನೆ ನಿರ್ಮಿಸಿಕೊಟ್ಟಿದ್ದಾರೆ. ಇದರಿಂದ ನಮ್ಮ ಜೀವನಕ್ಕೆ ಸಹಾಯವಾಗಿದೆ’ ಎಂದು ಕಿರಣ್ ಹಾಗೂ ಬೋಜಮ್ಮ ಹೇಳಿದರು. ದಾನಿ ಗಣೇಶ್ ಅವರ ಪತ್ನಿ ಸುಮಾ ಗಣೇಶ್, ತಂದೆ ಬಿ.ಆರ್. ಮಂಜಪ್ಪ, ತಾಯಿ, ಬಿ.ಎಂ. ಪಾರ್ವತಿ ಹಾಗೂ ಸಹೋದರ ಬಿ.ಎಂ,ಗಿರೀಶ್, ಅವರುಗಳು ಮತ್ತು ಗ್ರಾಮದ ಸ್ನೇಹಿತರು. ಸುಮಾ ಅವರು ಪತಿಯ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ. ಗಿರೀಶ್, ಪ್ರಮುಖರುಗಳಾದ ಜೀವನ್, ಟಿ.ಆರ್. ಗಣೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
-ಕಿಶೋರ್ ಕುಮಾರ್ ಶೆಟ್ಟಿ