ಗೋಣಿಕೊಪ್ಪಲು, ಜೂ. ೩೦: ಗೋಣಿಕೊಪ್ಪಲುವಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಚೆಪ್ಪುಡೀರ ಪಿ.ಬೋಪಣ್ಣ, ಕಾರ್ಯದರ್ಶಿಯಾಗಿ ಮನ್ನಕ್ಕಮನೆ ಸೌಮ್ಯಬಾಲು ಹಾಗೂ ಖಜಾಂಚಿಯಾಗಿ ಐನಂಡ ಎಂ. ಸೋಮಣ್ಣ ನೇಮಕಗೊಂಡಿದ್ದು, ಲಯನ್ಸ್ನ ಮಾಜಿ ಗವರ್ನರ್ ಪಿಡಿಜಿ ಲಯನ್ ಕಿಶೋರ್ ರಾವ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಗೋಣಿಕೊಪ್ಪಲುವಿನ ಅಂತೂರ ಸಭಾಂಗಣದಲ್ಲಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಲಯನ್ಸ್ನ ಸರ್ವ ಸದಸ್ಯರ ಸಹಕಾರದಿಂದ ಮತ್ತು ಒಗ್ಗಟ್ಟಿನಿಂದ ಹಲವು ಗುರಿಗಳನ್ನು ಸಾಧಿಸೋಣ ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದು ನೂತನ ಅಧ್ಯಕ್ಷ ಚೆಪ್ಪುಡಿರ ಪಿ. ಬೋಪಣ್ಣ ಮನವಿ ಮಾಡಿದರು.

ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ ಲಯನ್ಸ್ ಮಾಜಿ ಗವರ್ನರ್ ಕಿಶೋರ್ ರಾವ್ ಮಾತನಾಡಿ, ಲಯನ್ಸ್ ಕ್ಲಬ್‌ನ ಸೇವಾ ಚಟುವಟಿಕೆಗಳು ನಿಜಕ್ಕೂ ಸಮಾಜಕ್ಕೆ ಬೆಳಕು ನೀಡುವಂತವು. ಎಲ್ಲಾ ಸದಸ್ಯರು ಒಂದು ಕುಟುಂಬದAತೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸಹಾಯ, ಪರಿಸರ ಸಂರಕ್ಷಣೆ ಹಾಗೂ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಟ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಆಶಿಸುತ್ತೇನೆಂದು ನೂತನ ಆಡಳಿತ ಮಂಡಳಿಗೆ ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ಮಾತನಾಡಿ, ಲಯನ್ಸ್ ಕ್ಲಬ್‌ನ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಸರ್ವ ಸದಸ್ಯರು ಪಾಲ್ಗೊಳ್ಳುವ ಮೂಲಕ ನಿಗದಿತ ಗುರಿಯನ್ನು ಸಾಧಿಸಿದ್ದೇವೆ. ಮುಂದಿನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗಿಗಳಾಗೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂತ್ಯ ಅಧ್ಯಕ್ಷ ಕನ್ನಿಕ ಅಯ್ಯಪ್ಪ, ವಲಯ ಅಧ್ಯಕ್ಷರುಗಳಾದ ಮಹಾದೇವಪ್ಪ, ಬೊಳ್ಳಮ್ಮ, ಸುಮನ್, ಬಾಲಚಂದ್ರ, ನಿಕಟಪೂರ್ವ ಕಾರ್ಯದರ್ಶಿ ಶ್ರೀಮಂತ್, ಖಜಾಂಜಿ ಸಚಿನ್ ಬೆಳ್ಯಪ್ಪ, ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ನ ಹಿರಿಯರಾದ ಸಿ.ಎ. ಮುತ್ತಣ್ಣ, ಜಮ್ಮಡ ಮೋಹನ್, ಪಟ್ಟಡ ಧನು ಉತ್ತಯ್ಯ, ಡಾ.ಚಿಣ್ಣಪ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಭಾಗದಿಂದ ಲಯನ್ಸ್ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸುಧಾ ಪ್ರಸಾದ್ ಪ್ರಾರ್ಥಿಸಿ, ನಿಕಟಪೂರ್ವ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ಸ್ವಾಗತಿಸಿ, ಕಾರ್ಯದರ್ಶಿ ಮನ್ನಕ್ಕಮನೆ ಸೌಮ್ಯಬಾಲು ವಂದಿಸಿದರು.