ಸಿಎಂ ಬದಲಾವಣೆ, ಹೈಕಮಾಂಡ್ ನಿರ್ಧಾರ - ಖರ್ಗೆ

ಬೆಂಗಳೂರು, ಜೂ. ೩೦: ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಈ ಬಗ್ಗೆ ಅನಗತ್ಯ ಸಮಸ್ಯೆಯನ್ನು ಸೃಷ್ಟಿಸಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದರು. ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಮಾಧ್ಯಮಗಳ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು ಹೈಕಮಾಂಡ್‌ನಲ್ಲಿ ಏನು ನಡೆಯುತ್ತಿದೆ ಎಂದು ಇಲ್ಲಿ ಯಾರೂ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್‌ಗೆ ಬಿಟ್ಟ ವಿಷಯ ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಇದೆ. ಆದರೆ, ಅನಗತ್ಯವಾಗಿ ಯಾರೊಬ್ಬರೂ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.

ಔಷಧ ಘಟಕದಲ್ಲಿ ಸ್ಫೋಟ - ೮ ಸಾವು

ಸಂಗಾರೆಡ್ಡಿ, ಜೂ. ೩೦: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಔಷಧ ಘಟಕದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶಮೈಲಾರಂ ಕೈಗಾರಿಕಾ ಎಸ್ಟೇಟ್‌ನಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಹಲವರು ಸಿಲುಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದೆ. ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ವೈದ್ಯಕೀಯ ನೆರವು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮೂವರು ಉಗ್ರರ ಬಂಧನ

ಇAಫಾಲ, ಜೂ. ೩೦: ಮಣಿಪುರದ ಪಶ್ಚಿಮ ಮತ್ತು ಪೂರ್ವ ಇಂಫಾಲ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಗೆ (ಪಿಎಲ್‌ಎ) ಸೇರಿದ ದಂಗೆಕೋರನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಲ್ಯಾಲ್ಡಿಂಗ್ ಅವಾಂಗ್ ಲೈಕೈನಿಂದ ಬಂಧಿಸಲಾಗಿದೆ. ಬಂಧಿತನನ್ನು ಯುಮ್ನಾಮ್ ಪ್ರೇಮ್‌ಕುಮಾರ್ ಸಿಂಗ್ (೩೧) ಎಂದು ಗುರುತಿಸಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆ ಸೇರಿದಂತೆ ಇತರೆ ಸಂಸ್ಥೆಗಳಿAದ ಸುಲಿಗೆ ಮಾಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ. ನಿಷೇಧಿತ ಪ್ರೆಪಕ್-(ಪ್ರೊ) ಸಂಘಟನೆಯ ಸಕ್ರಿಯ ಕಾರ್ಯಕರ್ತನನ್ನು ಪಶ್ಚಿಮ ಇಂಫಾಲ ಜಿಲ್ಲೆಯ ಹೈರಂಗೋಯಿಥಾAಗ್‌ನಿAದ ಬಂಧಿಸಲಾಗಿದೆ. ಕೆಸಿಪಿನ (ಎಂಎಫ್‌ಎಲ್) ಮತ್ತೊಬ್ಬ ಉಗ್ರನನ್ನು ಪೂರ್ವ ಇಂಫಾಲ ಜಿಲ್ಲೆಯ ನಾಂಗ್‌ಪೋಕ್ ಸಂಜೆನ್‌ಬಾಮ್ ಖುಲ್ಲೆನ್‌ನಿಂದ ಬಂಧಿಸಲಾಗಿದೆ. ಬಿಷ್ಣುಪುರ ಜಿಲ್ಲೆಯ ಟೆರಾಖೋಂಗ್‌ಶಾAಗ್ನಿ ಮಾನಿಂಗ್ ಲೈಥೆಲ್‌ನಲ್ಲಿ ಇರಿಸಲಾಗಿದ್ದ ೫೧ ಎಂಎA ಐಎಲ್‌ಎಲ್‌ಜಿ ಬಾಂಬ್ ಅನ್ನು ಬಾಂಬ್ ನಿಷ್ಕಿçಯ ತಂಡವು ಸುರಕ್ಷಿತವಾಗಿ ನಿಷ್ಕಿçಯಗೊಳಿಸಿದೆ.

ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ

ಮೈಸೂರು, ಜೂ. ೩೦: ಕೃಷ್ಣರಾಜ ಸಾಗರ ಜಲಾಶಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಬಾಗಿನ ಅರ್ಪಿಸಿದ್ದಾರೆ. ಜೀವನದಿ ಕಾವೇರಿ ಮಾತೆಗೆ ಎಲ್ಲಾ ನಾಯಕರು ಬಾಗಿನ ಸಮರ್ಪಿಸಿದರು. ಇದೇ ಮೊದಲ ಬಾರಿಗೆ ಜೂನ್ ತಿಂಗಳ ಅವಧಿಯಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ೯೪ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿದೆ. ೧೨೪.೮೦ ಸಾಮರ್ಥ್ಯ ಹೊಂದಿರೋ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಇವತ್ತು ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಮೂಲಕ ಜೂನ್‌ನಲ್ಲಿ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.