ಗೋಣಿಕೊಪ್ಪಲು, ಜೂ. ೩೦ : ನಿರಂತರ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ತರುವ ಕೆಲಸ ತಕ್ಷಣದಿಂದ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಯಾವ ರೀತಿಯ ಸಹಕಾರ ಇಲಾಖೆಗೆ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಬೇಕು. ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನು ಜಿಲ್ಲೆಗೆ ಕರೆ ತರುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದ.ಕೊಡಗಿನ ಬಿ.ಶೆಟ್ಟಿಗೇರಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಗ್ರಾಮದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಪೊನ್ನಣ್ಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಹಲವು ಸಲಹೆಗಳನ್ನು ಹಾಗೂ ನಿzðೆÃಶನ ನೀಡಿದರು.

ಈಗಾಗಲೇ ಆನೆ ಮಾನವ ಸಂಘರ್ಷವನ್ನು ಹತೋಟಿಗೆ ತರುವ ಹಿನ್ನೆಲೆಯಲ್ಲಿ ೨೧ ಕೋಟಿ ಅನುದಾನವನ್ನು ಸರ್ಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ಇದರಲ್ಲಿ ೩.೫ ಕೋಟಿ ಬಿ.ಶೆಟ್ಟಿಗೇರಿ ಗ್ರಾಮಕ್ಕೆ ನೀಡಲಾಗಿದೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಡಿಎಫ್‌ಒ ನೆಹರು, ಮಳೆಗಾಲ ಕಳೆಯುತ್ತಿದ್ದಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ೧೬ ಕಿ.ಮೀ. ವ್ಯಾಪ್ತಿಯಲ್ಲಿ ಸಮಸ್ಯೆ ಇರುವುದರಿಂದ ಇನ್ನಷ್ಟು ಅನುದಾನವು ಅಗತ್ಯವಿದೆ. ಅನುದಾನ ಲಭ್ಯವಾದಲ್ಲಿ ಈ ಭಾಗದ ಶೇ.೭೦ರಷ್ಟು ಕಾಡಾನೆಗಳ ನಿಯಂತ್ರಣ ಕಾರ್ಯ ನಡೆಯಲಿದೆ ಎಂದು ಉತ್ತರಿಸಿದರು. ಹೆಚ್ಚಿನ ಅನುದಾನದ ಬಗ್ಗೆ ಕ್ರಮಕೈಗೊಳ್ಳುವುದಾಗಿ ಪೊನ್ನಣ್ಣ ಭರವಸೆ ನೀಡಿದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಮಾತನಾಡಿ ಪೊನ್ನಂಪೇಟೆ ಅರಣ್ಯ ವಲಯಾಧಿಕಾರಿ ಶಂಕರ್ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿ ಸಂದರ್ಭಗಳಲ್ಲಿಯೂ ಸಬೂಬುಗಳನ್ನು ಹೇಳುತ್ತ ಸಮಯ ಕಳೆಯುತ್ತಿದ್ದಾರೆ. ಇವರಿಂದ ಈ ಭಾಗದ ಆನೆ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ದೂರದ ಮಾಕುಟ್ಟ ಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಭಾಗಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಕಾಡಾನೆ ಓಡಿಸುವ ಕಾರ್ಯಕ್ಕೆ ಸ್ಥಳೀಯ ಸಿಬ್ಬಂದಿಗಳನ್ನೇ ನೇಮಕ ಮಾಡಬೇಕು.

ಇದರಿಂದ ಸ್ಥಳೀಯವಾಗಿ ಕಾಡಾನೆಯ ಸಂಚಾರವನ್ನು ನಿಯಂತ್ರಿಸಬಹುದಾಗಿದೆ. ಇವರುಗಳಿಗೆ ಇಲಾಖೆ ವತಿಯಿಂದ ಭದ್ರತೆ ಹಾಗೂ ವೇತನ ನೀಡಲು ಶಾಸಕರಲ್ಲಿ ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸುವಂತೆ ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ ಮಾತನಾಡಿ, ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಗ್ರಾಮೀಣ ಭಾಗವಾಗಿರುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ೩.೫ ಕೋಟಿ ಅನುದಾನವನ್ನು ಮೀಸಲಿಟ್ಟು ಹಲವು ತಿಂಗಳ ಹಿಂದೆ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದ್ದರು. ಆದರೆ ಇಲ್ಲಿಯ ತನಕ ಸಂಬAಧಿಸಿದ ಅರಣ್ಯ ಅಧಿಕಾರಿಗಳು ಕಾಮಗಾರಿ ಆರಂಭಿಸುವಲ್ಲಿ ವಿಫಲತೆ ಕಂಡಿದ್ದಾರೆ. ಕೇವಲ ಹಾರಿಕೆ ಉತ್ತರಗಳನ್ನು ಹೇಳುತ್ತ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಂತಹ ಆಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾಡಾನೆಗಳಿಂದ ರೈತರ ಬೆಳೆಗಾರರ ಫಸಲು ನಾಶವಾಗಿದ್ದು ಸೂಕ್ತ ಪರಿಹಾರವನ್ನು ಇಲಾಖೆ ವತಿಯಿಂದ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವಂತೆ ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕು. ಈ ಭಾಗದಲ್ಲಿ ನಿರಂತರವಾಗಿ ಕಾಡುತ್ತಿರುವ ಕಾಡಾನೆ ಉಪಟಳವನ್ನು ತಪ್ಪಿಸುವಲ್ಲಿ ಈ ಕಾಮಗಾರಿ ಅತ್ಯಗತ್ಯ ಎಂದು ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್, ಎಸಿಎಫ್ ಗೋಪಾಲ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಸಮಾಜದ ತಾಲೂಕು ಅಧ್ಯಕ್ಷರಾದ ಪೂಣಚ್ಚಿರ ಮನೋಜ್, ಉಪಸ್ಥಿತರಿದ್ದರು.